ಸುಳ್ಯ ಶ್ರೀವೆಂಕಟ್ರಮಣ ಸೊಸೈಟಿಯ ಮಹಾಸಭೆ: ಶೇ.15 ಲಾಭಾಂಶ ಘೋಷಣೆ
ಸುಳ್ಯ, ಸೆ.10: ಸುಳ್ಯದ ಶ್ರೀವೆಂಕಟ್ರಮಣ ಸೊಸೈಟಿ ಕಳೆದ ಆರ್ಥಿಕ ವರ್ಷದಲ್ಲಿ 54 ಲಕ್ಷದ 76 ಸಾವಿರ ರೂ. ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.15ರಷ್ಟು ಲಾಭಾಂಶ ವಿತರಣೆ ಮಾಡಿದೆ.
ಸೊಸೈಟಿ ಮಹಾಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್, 19 ವರ್ಷಗಳ ಹಿಂದೆ ಆರಂಭವಾದ ಸಂಘ ನಿರಂತರ ಪ್ರಗತಿಯಲ್ಲಿದ್ದು, ಕಳೆದ ಸಾಲಿನಲ್ಲಿ 230 ಕೋಟಿ ವ್ಯವಹಾರ ನಡೆಸಿದೆ. ಈಗಾಗಲೇ ಬೆಳ್ತಂಗಡಿ, ಪುತ್ತೂರು, ವಿಟ್ಲ, ಕಡಬ, ಮಂಗಳೂರು, ಬಿ.ಸಿ.ರೋಡ್, ಮಡಿಕೇರಿ, ಮೈಸೂರುಗಳಲ್ಲಿ ಶಾಖೆಗಳನ್ನು ಹೊಂದಿದೆ. 7,870 ಸದಸ್ಯರಿದ್ದು, 1ಕೋಟಿಯ 95 ಲಕ್ಷ ಪಾಲು ಬಂಡವಾಳ ಸಂಗ್ರಹಿಸಿದೆ. ಸದಸ್ಯರಿಂದ 44 ಕೋಟಿ ಠೇವಣಿ ಸಂಗ್ರಹಿಸಿ 39 ಕೋಟಿ ರೂ. ಸಾಲ ವಿತರಿಸಿದೆ. ಒಟ್ಟಾರೆ ಸಂಘದ ವ್ಯವಹಾರ ಕಳೆದ ಬಾರಿಗಿಂತ ಶೇ.58ರಷ್ಟು ವೃದ್ಧಿಯಾಗಿದೆ ಎಂದರು.
ಮುಂದಿನ ಆರ್ಥಿಕ ವರ್ಷದಲ್ಲಿ 75 ಕೋಟಿ ಠೇವಣಿ ಸಂಗ್ರಹಿಸಿ, 65 ಕೋಟಿ ಸಾಲ ವಿತರಿಸುವ ಮೂಲಕ 300 ಕೋಟಿ ರೂ. ವ್ಯವಹಾರ ಮಾಡುವ ಗುರಿಯನ್ನು ಸಂಘ ಹೊಂದಿದೆ ಎಂದವರು ಹೇಳಿದರು.
ಉಪಾಧ್ಯಕ್ಷ ಪಿ.ಎಸ್.ಗಂಗಾಧರ್, ನಿರ್ದೇಶಕರಾದ ಪಿ.ಸಿ. ಜಯರಾಮ, ಜಾಕೆ ಸದಾನಂದ, ನಿತ್ಯಾನಂದ ಮುಂಡೋಡಿ, ಎ.ವಿ.ತೀರ್ಥರಾಮ, ಕೆ.ಸಿ.ನಾರಾಯಣ ಗೌಡ, ಕೆ.ಸಿ.ಸದಾನಂದ, ಲಕ್ಷ್ಮೀನಾರಾಯಣ ನಡ್ಕ, ಮೋಹನರಾಂ ಸುಳ್ಳಿ, ದಿನೇಶ್ ಮಡಪ್ಪಾಡಿ, ದಾಮೋದರ ನಾರ್ಕೋಡು, ನಳಿನಿ ಸೂರಯ್ಯ, ಲತಾ ಎಸ್.ಮಾವಾಜಿ, ಜಯಲಲಿತ ಕೆ.ಎಸ್., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ ಪತ್ರಿಕಾಗೋಷ್ಠಿಯಲ್ಲಿದ್ದರು.







