ಗರ್ಭಿಣಿ ಸೊಸೆಯನ್ನು ಹೆಗಲಲ್ಲೇ ಹೊತ್ತು ಆಸ್ಪತ್ರೆಗೊಯ್ದ ಮಾವ :ಮಹಿಳೆಯ ಸಾವು
ಉತ್ತರ ಪ್ರದೇಶ: ವೈದ್ಯಕೀಯ ನಿರ್ಲಕ್ಷ ಪ್ರಕರಣ

ವಾರಣಾಸಿ, ಸೆ.10: ಉತ್ತರ ಪ್ರದೇಶದಲ್ಲಿ ವೈದ್ಯಕೀಯ ನಿರ್ಲಕ್ಷ ಆಘಾತಕಾರಿಯಾಗಿ ಮುಂದುವರಿದಿದೆ. ವಾರಣಾಸಿಯ ಸಮೀಪದ ಮಿರ್ಝಾಪುರದ 70ರ ಹರೆಯದ ವೃದ್ಧನೊಬ್ಬನು ತನ್ನ ಗರ್ಭಿಣಿ ಸೊಸೆಯನ್ನು ಅನ್ಯ ಮಾರ್ಗವಿಲ್ಲದೆ ಹೆಗಲ ಮೇಲೆ ಹೊತ್ತುಕೊಂಡು ಜಿಲ್ಲಾ ಮಹಿಳೆಯರ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಹಾಗೂ ಮರಳಿ ಅದೇ ಆಸ್ಪತ್ರೆಗೆ ತರುವ ವೇಳೆ ಆಕೆ ಕೊನೆಯುಸಿರೆಳೆದಿದ್ದಾಳೆ. ವೈದ್ಯಕೀಯ ನಿರ್ಲಕ್ಷವೇ ಮಹಿಳೆಯ ಸಾವಿಗೆ ಕಾರಣವೆಂದು ಆರೋಪಿಸಲಾಗಿದೆ.
ಗೆರುವಾ ಗ್ರಾಮದ ಕಪೂರ್‌ಚಂದ್ ಪಾಂಡೆ ಎಂಬಾತ ತನ್ನ ಸೊಸೆ ಅಂಶು ಪಾಂಡೆ ಎಂಬವಳನ್ನು ಕಳೆದ ರವಿವಾರ ನಸುಕಿನಲ್ಲಿ ಜಿಲ್ಲಾ ಮಹಿಳೆಯರ ಆಸ್ಪತ್ರೆಗೆ ಕರೆದೊಯ್ದಿದ್ದನು. ಆಕೆಯನ್ನು ತುರ್ತು ಚಿಕಿತ್ಸಾ ವಾರ್ಡ್‌ಗೆ ದಾಖಲಿಸಲಾಗಿತ್ತು. ಆದರೆ, ಅಂಶುವಿನ ಪರಿಸ್ಥಿತಿ ಗಂಭೀರವಿದ್ದರೂ, ಮುಂಜಾನೆ 8 ಗಂಟೆಯವರೆಗೆ ಯಾವನೇ ವೈದ್ಯ ಆಕೆಯನ್ನು ಪರೀಕ್ಷಿಸಲಿಲ್ಲ. ಬಳಿಕ ಪಾಂಡೆ, ಆಕೆಯನ್ನು ಹೆಗಲಲ್ಲಿ ಹೊತ್ತು ಸುಮಾರು 100ಮೀ. ದೂರದ ಖಾಸಗಿ ಆಸ್ಪತ್ರೆಯೊಂದಕ್ಕೆ ಒಯ್ದನು.
ಖಾಸಗಿ ಆಸ್ಪತ್ರೆಯ ವೈದ್ಯರು ಅಂಶುವನ್ನು ಪರೀಕ್ಷಿಸಿ ಮಗು ಹೊಟ್ಟೆಯಲ್ಲೇ ಸತ್ತಿದೆಯೆಂದು ತಿಳಿಸಿ, ಮತ್ತೆ ಜಿಲ್ಲಾ ಮಹಿಳೆಯರ ಆಸ್ಪತ್ರೆಗೆ ಒಯ್ಯುವಂತೆ ಸಲಹೆ ನೀಡಿದರು. ಅವಳನ್ನು ಹೆಗಲಲ್ಲಿ ಹೊತ್ತು ಪಾಂಡೆ ಪುನಃ ಜಿಲ್ಲಾಸ್ಪತ್ರೆಗೆ ತಂದನು. ಅಂಶುವಿಗೆ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು, ಮೃತ ಶಿಶುವನ್ನು ಹೊರ ತೆಗೆದರು. ಆದರೆ, ಶರೀರಕ್ಕೆ ಸೋಂಕು ಹರಡಿ ತಾಯಿಯೂ ಕೊನೆಯುಸಿರೆಳೆದಳೆಂದು ಪಾಂಡೆ ವಿವರಿಸಿದ್ದಾನೆ.
ವೈದ್ಯರ ನಿರ್ಲಕ್ಷದಿಂದಲೇ ತನ್ನ ಸೊಸೆ ಸತ್ತಳೆಂದು ಆತ ಆರೋಪಿಸಿದ್ದಾನೆ. ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ಸಂಜಯ್ ಪಾಂಡೆ, ಈ ಆರೋಪವನ್ನು ನಿರಾಕರಿಸಿದ್ದಾರೆ. ಆದಾಗ್ಯೂ, ಈ ಬಗ್ಗೆ ಪರಿಶೀಲನೆ ನಡೆಸುವೆನೆಂದು ಅವರು ಹೇಳಿದ್ದಾರೆ. ಇನ್ನೊಂದು ದಾರುಣ ಘಟನೆಯಲ್ಲಿ, 42ರ ಹರೆಯದ ರೋಗಿಯೊಬ್ಬನನ್ನು ಕಾಸ್‌ಗಂಜ್ ಜಿಲ್ಲಾಸ್ಪತ್ರೆಗೆ ಸಾಗಿಸಲು ಸರಕಾರಿ ಆ್ಯಂಬುಲೆನ್ಸ್‌ನ ಚಾಲಕ ರೂ. 1,500 ಲಂಚಕ್ಕೆ ಬೇಡಿಕೆ ಇಟ್ಟಿದರಿಂದ, ರೋಗಿಯ ಸಂಬಂಧಿಕರು ಆತನನ್ನು ಮೋಟಾರ್ ಬೈಕೊಂದರಲ್ಲಿ ಆಸ್ಪತ್ರೆಗೊಯ್ಯುವ ಪ್ರಯತ್ನ ನಡೆಸಿದರು. ಆದರೆ, ಆತ ದಾರಿಯಲ್ಲೇ ಕೊನೆಯುಸಿರೆಳೆದನು.
ಅವರು ಬೈಕ್‌ನ ಸವಾರ ಹಾಗೂ ಸಹಸವಾರನ ನಡುವೆ ಶವವನ್ನಿಟ್ಟು ಸಾಗಿಸುತ್ತಿದ್ದರು. ಆದರೆ, ಕೆಲವು ಗ್ರಾಮಸ್ಥರು ಮುಂದೆ ಬಂದು, ಚಾಲಕನಿಗೆ ರೂ. 500 ನೀಡಿ ಖಾಸಗಿ ಆ್ಯಂಬುಲೆನ್ಸ್ ಒಂದನ್ನು ವ್ಯವಸ್ಥೆ ಮಾಡಿದರು. ಅದರಲ್ಲಿ ಶವವನ್ನು ಗ್ರಾಮಕ್ಕೆ ತರಲಾಯಿತೆಂದು ಮೃತನ ಬಂಧುಗಳು ಪ್ರತಿಪಾದಿಸಿದ್ದಾರೆ.
ಆದರೆ, ಕಾಸ್‌ಗಂಜ್ ಜಿಲ್ಲಾ ದಂಡಾಧಿಕಾರಿ ಈ ಆರೋಪವನ್ನು ತಳ್ಳಿ ಹಾಕಿದ್ದು, ಈ ಘಟನೆ ಮಂಗಳವಾರ ನಡೆದಿದೆ. ಶುಕ್ರವಾರ ಅದು ಬಹಿರಂಗವಾಗಿದೆ. ಮೃತನ ಬಂಧುಗಳು ಸರಕಾರಿ ಆ್ಯಂಬುಲೆನ್ಸ್‌ಗಾಗಿ ಕೇಳಿಯೇ ಇರಲಿಲ್ಲವೆಂಬುದು ಸಿಎಂಒ ನಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ ಎಂದಿದ್ದಾರೆ.







