ಸಾಲ ತೆಗೆಸಿಕೊಡುವುದಾಗಿ ನಂಬಿಸಿ, ವಂಚಿಸಿದ ಆರೋಪಿಯ ಜಾಮೀನು ಅರ್ಜಿ ವಜಾ

ಉಪ್ಪಿನಂಗಡಿ, ಸೆ.10: ಸಾಲ ತೆಗೆಸಿಕೊಡುವುದಾಗಿ ನಂಬಿಸಿ, ಹಣ ಪಡೆದುಕೊಂಡು ಸಾಲ ತೆಗೆಸಿಕೊಡದೆ, ತಾನು ನೀಡಿರುವ ಹಣವನ್ನೂ ಕೊಡದೆ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವ ಉಪ್ಪಿನಂಗಡಿ ಪೆರಿಯಡ್ಕ ನಿವಾಸಿ ನಾಗೇಗೌಡನ ಜಾಮೀನು ಅರ್ಜಿಯನ್ನು ಜೆಎಂಎಫ್‌ಸಿ ನ್ಯಾಯಾಲಯ ವಜಾಗೊಳಿಸಿದೆ.
ಆರೋಪಿ ನಾಗೇಗೌಡ ತನ್ನ ಮಾನ್ಯ ಟ್ರಸ್ಟ್ ಸಂಸ್ಥೆಗೆ ಸಹಾಯಧನ ನೀಡಿದರೆ, ಅದರ ಮೂಲಕ ಕೃಷಿ ಸಾಲ ತೆಗೆಸಿಕೊಡುವುದಾಗಿ ಪತ್ರಿಕಾ ಜಾಹೀರಾತು ನೀಡಿ ನಂಬಿಸಿ ಒಂದೂವರೆ ಲಕ್ಷ ರೂಪಾಯಿ ಪಡೆದುಕೊಂಡಿದ್ದು, ಇದೀಗ 6 ತಿಂಗಳು ಕಳೆದರೂ ಸಾಲ ತೆಗೆಸಿಕೊಡದೆ ಮತ್ತು ನನ್ನಿಂದ ಪಡೆದುಕೊಂಡಿರುವ ಹಣವನ್ನೂ ನೀಡದೆ ವಂಚಿಸಿದ್ದಾನೆ ಎಂದು ಗದಗ ಮಚ್ಚಂಗಡಿ ನಿವಾಸಿ ಬಸವರಾಜ್ ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ಸೆ.1ರಂದು ಉಪ್ಪಿನಂಗಡಿ ಬಸ್‌ನಿಲ್ದಾಣದಲ್ಲಿ ಆರೋಪಿ ನಾಗೇಗೌಡನನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ಆತನ ಪರ ನ್ಯಾಯವಾದಿಗಳು ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದು, ಅದನ್ನು ನ್ಯಾಯಾಲಯ ವಜಾಗೊಳಿಸಿದೆ





