ಜೈನಾಬಿ ಇಸ್ಮಾಯೀಲ್ ಅಧ್ಯಕ್ಷೆ, ಶರಾವತಿ ಮೇಸ್ತ ಉಪಾಧ್ಯಕ್ಷೆ
ಹೊನ್ನಾವರ ಪಪಂ ಚುನಾವಣೆ

ಹೊನ್ನಾವರ, ಸೆ.10: ಪಟ್ಟಣ ಪಂಚಾಯತ್ ಎರಡನೆ ಅವಧಿಯ ನೂತನ ಅಧ್ಯಕ್ಷೆಯಾಗಿ ಜೈನಾಬಿ ಇಸ್ಮಾಯೀಲ್ ಸಾಬ್, ಉಪಾಧ್ಯಕ್ಷೆ ಶರಾವತಿ ಸುರೇಶ ಮೇಸ್ತ ಆಯ್ಕೆಯಾಗಿದ್ದಾರೆ. ಎರಡನೆ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ತುರುಸಿನ ಸ್ಪರ್ಧೆ ಏರ್ಪಟ್ಟಿದ್ದು ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿ ಜೈನಾಬಿ ಇಸ್ಮಾಯೀಲ್ ಸಾಬ್ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ರಾಜಶ್ರೀ ಬಾಲಚಂದ್ರ ನಾಯ್ಕ ಇವರಿಗಿಂತ 2 ಮತಗಳು ಹೆಚ್ಚಿಗೆ ಪಡೆದು ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಜಮೀಲಾ ಶೇಕ್ ಇವರಿಗಿಂತ ಎರಡು ಮತ ಹೆಚ್ಚಿಗೆ ಪಡೆದು ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಶರಾವತಿ ಸುರೇಶ ಮೇಸ್ತ ಆಯ್ಕೆಯಾಗಿದ್ದಾರೆ. ಅಧ್ಯಕ್ಷೆ ಜೈನಾಬಿ ಇಸ್ಮಾಯೀಲ್ ಸಾಬ್ ಹಾಗೂ ಉಪಾಧ್ಯಕ್ಷೆ ಶರಾವತಿ ಸುರೇಶ ಮೇಸ್ತ ಇವರು ತಲಾ 10 ಮತ ಪಡೆದು ಗೆಲುವು ಸಾಧಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮತ್ತು ಅ ವರ್ಗ ಮಹಿಳೆ ಮೀಸಲಾತಿ ನಿಗದಿಪಡಿಸಲಾಗಿತ್ತು. 18 ಸದಸ್ಯ ಬಲ ಹೊಂದಿರುವ ಪಟ್ಟಣ ಪಂಚಾಯತ್‌ನಲ್ಲಿ 10 ಕಾಂಗ್ರೆಸ್, 3 ಬಿಜೆಪಿ, 4 ಜೆಡಿಎಸ್, ಓರ್ವ ಪಕ್ಷೇತರ ಸದಸ್ಯರಿದ್ದಾರೆ. ಹಾಗೆಯೇ ಶಾಸಕಿ ಶಾರದಾ ಶೆಟ್ಟಿಯವರ ಒಂದು ಮತ ಸೇರಿ ಒಟ್ಟು 19 ಮತಗಳು ಇದ್ದವು. ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ವಿ.ಆರ್.ಗೌಡ, ಕಂದಾಯ ಅಧಿಕಾರಿ ಸತೀಶ್ ಗೌಡ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಗೆಲುವು ಸಾಧಿಸಿದ ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿದರು.
ಶಾಸಕಿ ಶಾರದಾ ಶೆಟ್ಟಿ ಮಾತನಾಡಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರು ಪಟ್ಟಣದ ಅಭಿವೃದ್ಧಿಗೆ ಶ್ರಮಿಸಬೇಕು. ನನ್ನ ಸಹಕಾರ ನಿಮಗಿದೆ ಎಂದರು.







