ಕಪ್ಪುಹಣವನ್ನು ಘೋಷಿಸಲು ಇನ್ನು 20 ದಿನ ಮಾತ್ರ ಅವಕಾಶ

ಹೊಸದಿಲ್ಲಿ,ಸೆ.10: ಆದಾಯ ಘೋಷಣೆ ಯೋಜನೆ(ಐಡಿಎಸ್)ಯು ಅಂತ್ಯಗೊಳ್ಳಲು ಕೇವಲ 20 ದಿನಗಳು ಬಾಕಿಯಿದ್ದು, ಕಪ್ಪುಹಣ ಹೊಂದಿರುವವರು ಯಾವುದೇ ವಿಳಂಬ ಮಾಡದೆ ಅದನ್ನು ಘೋಷಿಸುವಂತೆ ಆದಾಯ ತೆರಿಗೆ ಇಲಾಖೆಯು ಶನಿವಾರ ಟ್ವಿಟರ್ ಸಂದೇಶದಲ್ಲಿ ತಿಳಿಸಿದೆ. ಕಪ್ಪುಹಣವನ್ನು ಹೊಂದಿರುವವರು ತೆರಿಗೆ ಮತ್ತು ದಂಡ ಪಾವತಿಯೊಡನೆ ಅದನ್ನು ಘೋಷಿಸಲು ಸರಕಾರವು ಕಲ್ಪಿಸಿರುವ ಒಂದು ಬಾರಿಯ ಗಡುವು ಸೆ.30ರಂದು ಕೊನೆಗೊಳ್ಳಲಿದೆ.
ಕಪ್ಪುಹಣ ಘೋಷಿಸುವವರ ಗೋಪ್ಯತೆಯನ್ನು ಕಾಪಾಡಲು ಅಂತಹ ಅಘೋಷಿತ ಆಸ್ತಿಗಳನ್ನು ಘೋಷಿಸಲು ಇಂಟರ್‌ನೆಟ್ ಆಧಾರಿತ ಇ-ಫೈಲಿಂಗ್ ಪೋರ್ಟಲ್ ಅನ್ನು ಸಕ್ರಿಯಗೊಳಿಸಲಾಗಿದೆ ಎಂದೂ ಇಲಾಖೆಯು ತಿಳಿಸಿದೆ.
ಐಡಿಎಸ್ ಕುರಿತಂತೆ ಆರನೇ ಬಾರಿಗೆ ಸ್ಪಷ್ಟೀಕರಣವನ್ನು ನೀಡಿರುವ ಇಲಾಖೆಯು ಪ್ರಸ್ತುತ ಚಾಲ್ತಿಯಲ್ಲಿರುವ ನಾಲ್ಕು ತಿಂಗಳ ಗಡುವನ್ನು ಸೆ.30ರ ನಂತರ ಮತ್ತೆ ವಿಸ್ತರಿಸಲಾಗುವುದಿಲ್ಲ ಎಂದು ಖಡಾಖಂಡಿತವಾಗಿ ತಿಳಿಸಿದೆ.
ಐಡಿಎಸ್‌ನಡಿ ತೆರಿಗೆ,ಮೇಲ್ತೆರಿಗೆ ಮತ್ತು ದಂಡವನ್ನು ಪಾವತಿಸಲು ಗಡುವನ್ನು ಸರಕಾರವು ವಿಸ್ತರಿಸಿದ್ದು, ಮುಂದಿನ ವರ್ಷದ ಸೆ.30ರೊಳಗೆ ಮೂರು ಕಂತುಗಳಲ್ಲಿ ಪಾವತಿಸುವ ಅವಕಾಶವನ್ನು ಕಲ್ಪಿಸಿದೆ. ಈ ಹಿಂದಿನ ಸೂಚನೆಯಂತೆ ಈ ಮೊತ್ತವನ್ನು ಈ ವರ್ಷದ ನವೆಂಬರ್ 30ರೊಳಗೆ ಪಾವತಿಸಬೇಕಾಗಿತ್ತು.







