ಸರಕಾರಿ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರತ್ಯೇಕ ಕಾಂಬಿನೇಷನ್ ಜಾರಿಯಾಗಲಿ
ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

ದಾವಣಗೆರೆ, ಸೆ.10: ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗಾಗಿ ಸರಕಾರಿ ಸ್ನಾತಕೋತ್ತರ ಕೇಂದ್ರಗಳಲ್ಲಿ ಪ್ರತ್ಯೇಕ ಕಾಂಬಿನೇಷನ್ ಪ್ರಾರಂಭಿಸುವುದು ಒಳಿತು ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕಿ ಪ್ರೋ.ಎಚ್. ಕುಸುಮಾ ಅಭಿಪ್ರಾಯಪಟ್ಟರು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಾಗೂ ಸ್ನಾತಕೋತ್ತರ ಕೇಂದ್ರದ ಆವರಣದಲ್ಲಿ ಶನಿವಾರ ನಡೆದ ಸಾಂಸ್ಕೃತಿಕ, ಕ್ರೀಡೆ, ಎನ್ನೆಸ್ಸೆಸ್, ಎನ್‌ಸಿಸಿ, ಸ್ಕೌಟ್ ಮತ್ತು ಗೈಡ್ಸ್, ರೆಡ್‌ಕ್ರಾಸ್, ವಿವಿಧ ಕೋಶಗಳ ವಾರ್ಷಿಕ ಉದ್ಘಾಟನೆ ಹಾಗೂ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿವಿಗಳಲ್ಲಿ ಇರುವಂತೆ ಸ್ನಾತಕೋತ್ತರ ಕೇಂದ್ರಗಳಲ್ಲಿ ಪ್ರತ್ಯೇಕ ಕಾಂಬಿನೇಷನ್‌ಗಳು ಸರಕಾರಿ ಸ್ನಾತಕೋತ್ತರ ಕೇಂದ್ರಗಳಲ್ಲಿ ಇಲ್ಲ. ಕೇವಲ ಕನ್ನಡ, ಇಂಗ್ಲೀಷ್ ಈ ಎರಡು ಕಾಂಬಿನೇಷನ್ ಇದ್ದರೆ ಸಾಲದು ಪ್ರತ್ಯೇಕ ಕಾಂಬಿನೇಷನ್‌ಗಳು ಪ್ರಾರಂಭವಾದರೆ ಉನ್ನತ ವ್ಯಾಸಂಗ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ತುಂಬಾ ಸಹಕಾರಿಯಾಗುತ್ತದೆ. ಅದರಲ್ಲಿ ಅಧ್ಯಾಪಕರ ಸಹಭಾಗಿತ್ವ ತುಂಬಾ ಮುಖ್ಯವಾಗಿದೆ ಎಂದರು.
1992ರಲ್ಲಿ ಪ್ರಾರಂಭಗೊಂಡ ಕಾಲೇಜು ಎರಡು ದಶಕದಲ್ಲಿ ಸಾಕಷ್ಟು ಸಾಧನೆ ಮಾಡಿದೆ. ಇಷ್ಟಕ್ಕೆ ನಿಲ್ಲದೆ ನಿರಂತರವಾಗಿ ಹೆಚ್ಚಿನ ಪ್ರಗತಿ ಕಾಣಬೇಕು. ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಗಣನೀಯ ಪಾತ್ರ ವಹಿಸುತ್ತಿದ್ದಾರೆ. ಆದರೆ, ಕಾಲೇಜಿನಲ್ಲಿ ಮಹಿಳಾ ಉಪನ್ಯಾಸಕರಿಗೆ ಕಮಿಟಿಯಲ್ಲಿ ಅವಕಾಶ ನೀಡಿಲ್ಲ. ಒಂದು ವೇಳೆ ಅವಕಾಶ ಸಿಕ್ಕರೆ ಮಹಿಳೆಯರು ಸ್ವ ಇಚ್ಛೆಯಿಂದ ಕಮಿಟಿಯಲ್ಲಿ ಭಾಗವಹಿಸಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು. ವಿದ್ಯಾರ್ಥಿಗಳು ಕೇವಲ ನಾಲ್ಕು ಗೋಡೆಗಳ ಮಧ್ಯೆ ಜ್ಞಾನಾರ್ಜನೆ ಪಡೆದುಕೊಂಡರೆ ಸಾಲದು. ಎಲ್ಲ ಕ್ಷೇತ್ರದಲ್ಲಿಯು ಸಹ ತಮ್ಮಲ್ಲಿರುವ ಪ್ರತಿಭೆ ಪ್ರದರ್ಶಿಸುವ ಗುರಿ ಹೊಂದಿರಬೇಕು. ವಿದ್ಯಾರ್ಥಿಗಳು ಉತ್ತಮ ಗುಣ ಮೈಗೂಡಿಸಿಕೊಳ್ಳುವುದಕ್ಕೆ ಪುಸ್ತಕ ಓದಬೇಕು. ಅಲ್ಲದೆ, ದೇಶಕ್ಕೆ ಹಾಗೂ ತಂದೆ, ತಾಯಿಗಳಿಗೆ ನಾವು ಏನು ಕೊಡುಗೆ ನೀಡಿದ್ದೇವೆ ಎಂಬುದನ್ನು ಅಥರ್ ಮಾಡಿಕೊಂಡು ನಡೆದಾಗ ಮಾತ್ರ ಉತ್ತಮ ವ್ಯಕ್ತಿಯಾಗಲು ಸಾಧ್ಯ ಎಂದು ನುಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ಮಾತನಾಡಿ, ಸ್ನಾತಕೋತ್ತರ ಕಲಾ ವಿಭಾಗದಲ್ಲಿ ಎಂಎಯಿಂದ ಇತಿಹಾಸ, ರಾಜಶಾಸ್ತ್ರ ಹಾಗೂ ವಿಜ್ಞಾನ ವಿಭಾಗದಿಂದ ಇವಿಎಸ್ ಕೂಡ ಇದೆ. ಆದರೆ, ಕಾಲೇಜಿನಲ್ಲಿ ಕೊಠಡಿಗಳ ಹಾಗೂ ಪ್ರಯೋಗಾಲಯದ ಕೊರತೆಯಿಂದ ಅವುಗಳನ್ನು ನಡೆಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಈಗಿನ ಪರಿಸ್ಥಿತಿಗೆ ಸುಮಾರು 20 ಕೊಠಡಿಗಳ ಆವಶ್ಯಕತೆ ಇದೆ. ಈ ವಿಷಯವನ್ನು ಸರಕಾರದ ಗಮನಕ್ಕೆ ತಂದು ತಕ್ಷಣವೇ ಕೊಠಡಿಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿಕೊಂಡರು.
ಸಾಹಿತಿ ಪ್ರೋ. ಬಿದರಹಳ್ಳಿ ನರಸಿಂಹಮೂರ್ತಿ ಮಾತನಾಡಿದರು. ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಎಸ್.ಆರ್. ಭಜಂತ್ರಿ, ಪ್ರೊ. ತೂ.ಕ. ಶಂಕರಯ್ಯ, ಪ್ರೋ.ಟಿ. ವೀರೇಶ್, ಪ್ರೊ.ಬಿ.ಎಚ್. ಲಕ್ಷ್ಮಣ್, ಪ್ರೋ.ಎಂ.ಕೆ. ದಾನಪ್ಪ, ಪ್ರೋ.ಎಚ್. ಗಿರಿಸ್ವಾಮಿ, ಡಾ.ಕೆ.ಎಂ. ಯೋಗೇಶ್, ಡಾ.ಸಿ.ಎಸ್. ಸೋಮಶೇಖರಪ್ಪ, ಪ್ರೋ.ಸದಾಶಿವಪ್ಪ, ಡಾ.ಕೆ. ನಾರಾಯಣಸ್ವಾಮಿ, ಡಾ. ಮಂಜಣ್ಣ, ಭೀಮಣ್ಣ ಸುಣಗಾರ್, ಶಶಿಕಲಾ, ಪ್ರಕಾಶ್ ಹಲಗೇರಿ, ಡಾ. ಗಂಗಾಧರಯ್ಯ ಹಿರೇಮಠ್, ಪ್ರೊ.ಎಸ್.ಪಿ. ನಾಗನಗೌಡ ಸೇರಿದಂತೆ ಹಲವಾರು ವಿದ್ಯಾರ್ಥಿನಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು







