ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು: ಶಾಸಕ ಮಧು ಬಂಗಾರಪ್ಪ
ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ

ಸೊರಬ, ಸೆ.10: ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಪೋಷಕರಿಗಿಂತ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಶಿಕ್ಷಣ ಕ್ಷೇತ್ರದ ಬಲವರ್ಧನೆಗಾಗಿ ಸರಕಾರ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಸಕ ಮಧು ಬಂಗಾರಪ್ಪತಿಳಿಸಿದರು.
ತಾಲೂಕಿನ ನಿಸರಾಣಿಯ ವಿ.ಸಂ ಪ್ರೌಢಶಾಲೆಯ ಆವರಣದಲ್ಲಿ ಜಿಪಂ, ತಾಪಂ, ತಾಲೂಕು ಆಡಳಿತ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸೊರಬ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆಗಳಲ್ಲಿನ ಶಿಕ್ಷಕರ ಕೊರತೆ ಸೇರಿದಂತೆ ಶಿಕ್ಷಣ ಕ್ಷೇತ್ರವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಪ್ರಸಕ್ತ ಶೈಕ್ಷಣಿಕ ವರ್ಷ ಪ್ರಾರಂಭಗೊಂಡು ಸುಮಾರು ನಾಲ್ಕು ತಿಂಗಳು ಕಳೆದಿವೆ. ಈವರೆಗೂ ಅತಿಥಿ ಶಿಕ್ಷಕರ ನೇಮಕವಾಗಿಲ್ಲ, ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆಯಾಗುತ್ತಿದೆ. ಕಳೆದ ವರ್ಷ ಜಿಲ್ಲೆಯಲ್ಲಿಯೇ ತಾಲೂಕಿಗೆ ಹೆಚ್ಚಿನ ಸಂಖ್ಯೆಯ ಅತಿಥಿ ಶಿಕ್ಷಕರನ್ನು ಕೋರಿಕೆಯ ಮೇರೆಗೆ ನೇಮಿಸಲಾಗಿತ್ತು. ರಾಜ್ಯದಾದ್ಯಂತ ಸರಕಾರಿ ಶಾಲೆಗಳಲ್ಲಿ ಸಾವಿರಾರು ಶಿಕ್ಷಕರ ಹುದ್ದೆಗಳು ಖಾಲಿಯಿದ್ದು, ಸರಕಾರ ಕೇವಲ ಅತಿಥಿ ಶಿಕ್ಷಕರ ನೇಮಕಾತಿ ಬಗ್ಗೆ ಚಿಂತಿಸುತ್ತಿದೆಯೇ ಹೊರತು, ಖಾಯಂ ಶಿಕ್ಷಕರ ನೇಮಕಾತಿ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ದೂರಿದರು.
ಇದೇ ಸಂದರ್ಭ ನಿವೃತ್ತ ಹಾಗೂ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸ.ಮ.ಪ್ರ.ದ.ಕಾಲೇಜು ಸಾಗರ ಉಪನ್ಯಾಸಕ ಎನ್. ಸುರೇಶ್ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಪಂ ಅಧ್ಯಕ್ಷೆ ನಯನಾ ಶ್ರೀಪಾದ ಹೆಗಡೆ ವಹಿಸಿದ್ದರು. ಈ ವೇಳೆ ಜಿಪಂ ಸದಸ್ಯರಾದ ಶಿವಲಿಂಗೇಗೌಡ, ರಾಜೇಶ್ವರಿ ಗಣಪತಿ, ಸುರೇಶ್, ಅಂಜಲಿ ಸಂಜೀವ, ಲತಾ ಸುರೇಶ್, ಎಂ. ನಾಗರಾಜ್, ಶರಾವತಿ, ಲಕ್ಷ್ಮೀ, ಪ್ರಭಾರ ಬಿಇಒ ಎಚ್.ಜಿ. ಆಂಜನೇಯ, ಕೆ.ಸಿ. ಶಿವಕುಮಾರ್, ಪ್ರಕಾಶ್ ಮಡ್ಲೂರ್, ಬಸವರಾಜ್ ಜಡ್ಡಳ್ಳಿ, ಎಚ್.ಜಿ. ಗಣಪತಿ, ಶೇಖರ್ ನಾಯ್ಕ್ಕಿ, ದೀಪಕ್, ಹಾಲೇಶ್ ನವುಲೆ ಮತ್ತಿತರರಿದ್ದರು.







