ನಕಲಿ ನಾಟಿ ವೈದ್ಯರಿಗೆ ಧರ್ಮದೇಟು
.jpg)
ಸಾಗರ, ಸೆ.10: ಆಯುರ್ವೇದ ಔಷಧ ನೀಡುವುದಾಗಿ ಜನರನ್ನು ವಂಚಿಸುತ್ತಿದ್ದ ಇಬ್ಬರನ್ನು ಶನಿವಾರ ಸಾರ್ವಜನಿಕರು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಭೀಮನಕೋಣೆ ರಸ್ತೆಯ ಗಾಂಧಿನಗರದ ಅಗ್ರಹಾರ ವೃತ್ತದಲ್ಲಿ ನಡೆದಿದೆ. ಭದ್ರಾವತಿ ತಾಲೂಕಿನ ಸಿದ್ದರಕ್ಯಾಂಪ್ ನಿವಾಸಿಗಳಾದ ತಿಮ್ಮಯ್ಯ ಮತ್ತು ಭಾಗ್ಯರಾಜ್ ಎಂಬವರು ತಾವು ಪಾರ್ಶ್ವವಾಯು ಹಾಗೂ ಮಕ್ಕಳು ಆಗದೆ ಇರುವುದಕ್ಕೆ ನಾಟಿ ಔಷಧ ಕೊಡುತ್ತೇವೆ ಎಂದು ಹೇಳಿಕೊಂಡು ರೋಗಿಗಳಿಂದ 10 ಸಾವಿರ ರೂ. ಪಡೆದು ನಕಲಿ ಔಷಧ ನೀಡಿ ವಂಚಿಸುತ್ತಿದ್ದರು ಎಂದು ತಿಳಿದುಬಂದಿದೆ. ಗ್ರಾಮಾಂತರ ಪ್ರದೇಶದ ಅನೇಕ ಜನರಿಗೆ ಔಷಧ ನೀಡಿದ್ದರೂ ಯಾವುದೇ ಗುಣ ಕಂಡಿರಲಿಲ್ಲ. ಇದರಿಂದ ಹಣ ಕೊಟ್ಟು ಬೇಸ್ತುಬಿದ್ದ ರೋಗಿಗಳ ಸಂಬಂಧಿಕರು ತಿಮ್ಮಯ್ಯ ಹಾಗೂ ಭಾಗ್ಯರಾಜು ಅವರನ್ನು ಹುಡುಕಾಟ ನಡೆಸಿದ್ದರು. ಶನಿವಾರ ಬೆಳಗ್ಗೆ ಅಗ್ರಹಾರ ಸರ್ಕಲ್‌ನ ವೆಲ್ಡಿಂಗ್ ಶಾಪ್ ಮಾಲಕ ಸುಬ್ರಹ್ಮಣ್ಯ ಎಂಬವರು ಪಾರ್ಶ್ವವಾಯು ಪೀಡಿತರಾಗಿದ್ದಾರೆ ಎಂದು ಮಾಹಿತಿ ಪಡೆದು ನಾಟಿ ಔಷಧ ನೀಡಲು ಬಂದಿದ್ದಾರೆ. ಈ ಸಂದರ್ಭ ನಕಲಿ ನಾಟಿ ವೈದ್ಯರಿಂದ ಮೋಸ ಹೋಗಿದ್ದ ಸಾರ್ವಜನಿಕರು ವೆಲ್ಡಿಂಗ್ ಶಾಪ್‌ಗೆ ಬಂದಿದ್ದಾರೆ. ಸಾರ್ವಜನಿಕರನ್ನು ನೋಡಿ ನಕಲಿ ನಾಟಿವೈದ್ಯರಾದ ತಿಮ್ಮಯ್ಯ ಹಾಗೂ ಭಾಗ್ಯರಾಜ್ ಓಡಿಹೋಗುವ ಪ್ರಯತ್ನ ನಡೆಸಿದಾಗ ಜನರು ಅವರನ್ನು ಹಿಡಿದು ಧರ್ಮದೇಟು ನೀಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ.





