ಅಕ್ರಮ ಮರ ಸಾಗಾಟ: ಆರೋಪಿ ಸಹಿತ ಸೊತ್ತು ವಶ
ಕುಶಾಲನಗರ, ಸೆ.10: ಸಮೀಪದ ಗುಡ್ಡೆಹೊಸೂರು ಬಳಿ ಅಕ್ರಮವಾಗಿ ಬೀಟೆ ಮರ ಸಾಗಾಟ ಮಾಡುತ್ತಿದ್ದ ಮಿನಿ ಲಾರಿ ವಶಪಡಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿರುವ ಘಟನೆ ವರದಿಯಾಗಿದೆ.
ಬೆಳಗಿನ ಜಾವ 3:30ರ ಸಮಯದಲ್ಲಿ ನಾಪೋಕ್ಲುವಿನಿಂದ ಮೈಸೂರಿಗೆ ಮಿನಿ ಲಾರಿಯಲ್ಲಿ ಅಕ್ರಮವಾಗಿ 4ಲಕ್ಷ ರೂ. ಬೆಲೆ ಬಾಳುವ ಬೀಟೆ ಮರದ 18 ತುಂಡುಗಳನ್ನು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ಎ ನೇಹರ್ ರವರ ಮಾರ್ಗದರ್ಶನದಲ್ಲಿ ಅತ್ತೂರು ಮೀಸಲು ಅರಣ್ಯಾಧಿಕಾರಿ ಕೆ.ವಿ ಶಿವರಾಂ ಮತ್ತು ಕುಶಾಲನಗರ ವಲಯದ ಉಪ ಅರಣ್ಯಾಧಿಕಾರಿಯಾದ ಕೆ.ಪಿ ರಂಜನ್ ರವರ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.
ತಕ್ಷಣವೇ ವಾಹನದಲ್ಲಿದ್ದ ಚಾಲಕ ಶಾಹೀದ್(27), ಮೈಸೂರು ಜಿಲ್ಲೆಯ ಕೆ.ಆರ್ ನಗರ ತಾಲೂಕಿನ ಹರಕೇಶ್ವರ ಗ್ರಾಮದ ನಿವಾಸಿ ರಾಜೇಶ್(23) ಎಂಬವರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿ, ವಾಹನವನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ.
ಆರೋಪಿಗಳ ವಿರುದ್ಧ ದೂರು ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ವಿಚಾರವಾಗಿ ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ಎ ನೇಹರ್ ಮಾತನಾಡಿ, ಈ ಮಿನಿ ವಾಹನದಲ್ಲಿ ಮೊದಲು ಎರಡು ಬಾರಿ ಅಕ್ರಮವಾಗಿ ಮರ ಸಾಗಿಸುವ ವೇಳೆ ಪೊಲೀಸ್ ಇಲಾಖೆಗೆ ಸಿಕ್ಕಿಬಿದ್ದಿರುತ್ತಾರೆ. ಹಾಗೆ ನಮ್ಮ ಇಲಾಖೆಯಲ್ಲೂ ಸಹ ವಾಹನದ ಮೇಲೆ ಕೇಸ್ ದಾಖಲಾಗಿರುತ್ತದೆ. ಮೂರು ತಿಂಗಳ ಹಿಂದೆಯಷ್ಟೇ ವಾಹನವನ್ನು ಬಿಡುಗಡೆ ಮಾಡಲಾಗಿತ್ತು. ಮತ್ತೆ ಇದೇ ವಾಹನದಲ್ಲಿ ಅಕ್ರಮವಾಗಿ ಬೀಟೆ ಮರ ಸಾಗಿಸುತ್ತಿದ್ದು ಕಂಡು ಬಂದಿದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕಿನ ಅರಣ್ಯ ಸಂರಕ್ಷಣಾಧಿಕಾರಿ ಚಿಣ್ಣಪ್ಪ, ಅರಣ್ಯ ಇಲಾಖೆಯ ಸಿಬ್ಬಂದಿಮಂಜೇಗೌಡ, ಗಣೇಶ್, ಸುರೇಶ್ ಮತ್ತಿತರರು ಹಾಜರಿದ್ದರು.







