ಸೀಬರ್ಡ್ ನಿರಾಶ್ರಿತರ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ

ಕಾರವಾರ, ಸೆ.10: ತಾಲೂಕಿನ ಚಿತ್ತಾಕುಲಾದ ಸೀಬರ್ಡ್ ನಿರಾಶ್ರಿತರ ಪುನರ್ವಸತಿ ಕೇಂದ್ರಕ್ಕೆ ವಿಶೇಷ ಭೂ ಸ್ವಾಧೀನದ ರಾಜ್ಯ ಸಮಿತಿ ಮೂಲಭೂತ ಸವಲತ್ತುಗಳನ್ನು ಕಲ್ಪಿಸಲು ನಿರ್ಣಯಿಸಿದೆ. ಈ ಕಾರಣದಿಂದಾಗಿ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಅವರು ಚಿತ್ತಾಕುಲಾದ ಪುನರ್ವಸತಿ ಕೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲೂಕಿನ ಪುನರ್ವಸತಿ ಕೇಂದ್ರಗಳಿಗೆ ಹಂತ ಹಂತವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಿರ್ಧರಿಸಿದೆ. ಈ ಬಗ್ಗೆ ಹಿಂದೆ 4.63 ಕೋಟಿ ರು.ವೆಚ್ಚದಲ್ಲಿ ಕಾರವಾರ ತಾಲೂಕಿನ ಮುದಗಾ, ತೋಡೂರು ಮತ್ತು ಅಮದಳ್ಳಿ ಹಾಗೂ ಅಂಕೋಲಾ ತಾಲೂಕಿನ ಹಾರವಾಡ ಮತ್ತು ಬೇಲೆಕೇರಿ ಪುನರ್ವಸತಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿತ್ತು. ಆದರೆ ಈ ಯೋಜನೆಯಲ್ಲಿ ಕಾರವಾರದ ಚಿತ್ತಾಕುಲದ ಪುನರ್ವಸತಿ ಕೇಂದ್ರಕ್ಕೆ ಅನುದಾನದ ಕೊರತೆಯಿಂದಾಗಿ ಮೂಲಸೌಕರ್ಯ ಲಭಿಸಿರಲಿಲ್ಲ. ಈಗ ಚಿತ್ತಾಕುಲಾ ಪುನರ್ವಸತಿ ಕೇಂದ್ರಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಮಾಹಿತಿ ಸಂಗ್ರಹಿಸಿದರು. ಈ ಯೋಜನೆಯಲ್ಲಿ ಸೀಬರ್ಡ್ ನಿರಾಶ್ರಿತರಿಗಾಗಿ ಸ್ಥಾಪಿಸಲಾದ ಪ್ರದೇಶದಲ್ಲಿ ರಸ್ತೆ, ಚರಂಡಿ, ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ, ಅಂಗನವಾಡಿ ಕಟ್ಟಡಗಳ ದುರಸ್ಥಿ ಸೇರಿದಂತೆ ಹಲವು ಕಾಮಗಾರಿ ನಡೆಸಲಿದೆ. ಕೇಂದ್ರಕ್ಕೆ ಅಗತ್ಯ ಸೌಕರ್ಯಗಳನ್ನು ಒದಗಿಸುವ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಗೆ ಅಂದಾಜು ವೆಚ್ಚ ತಯಾರಿಸಲು ಸೂಚಿಸಲಾಗಿದೆ. ಈ ಸಂದರ್ಭದಲ್ಲಿ ನೌಕಾನೆಲೆ ವಿಶೇಷ ಭೂಸ್ವಾಧೀನಾಧಿಕಾರಿ ಡಾ. ಮಹೇಶ ಕರ್ಜಗಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.





