ರೈಲ್ವೆ ಜಾಗದಲ್ಲಿ ಕಸ ಹಾಕಿದರೆ ಕಠಿಣ ಕ್ರಮ: ಸದಾನಂದಗೌಡ

ಬೆಂಗಳೂರು, ಸೆ.10: ರೈಲ್ವೆ ಇಲಾಖೆಗೆ ಸೇರಿದ ಜಾಗಗಳು ಹಾಗೂ ರೈಲ್ವೆ ಹಳಿಗಳ ಮೇಲೆ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಯೋಜನೆ ಹಾಗೂ ಸಾಂಖ್ಯಿಕ ಸಚಿವ ಡಿ.ವಿ.ಸದಾನಂದಗೌಡ ಸೂಚನೆ ನೀಡಿದ್ದಾರೆ.
ಶನಿವಾರ ನಗರದಲ್ಲಿರುವ ನೈರುತ್ಯ ರೈಲ್ವೆ ವಿಭಾಗೀಯ ಕಚೇರಿ ಬೆಂಗಳೂರಿನಲ್ಲಿ ಬಾಕಿಯಿರುವ ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಎಂಟು ವಿಧಾನಸಭಾ ಕ್ಷೇತ್ರಗಳು ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರ ಸೇರಿದಂತೆ ಒಟ್ಟು ಒಂಭತ್ತು ಕ್ಷೇತ್ರಗಳಲ್ಲಿ ರೈಲ್ವೆಗೆ ಸಂಬಂಧಿಸಿದ ಸುಮಾರು 28 ವಿಷಯಗಳ ಕುರಿತು ಇಂದಿನ ಸಭೆಯಲ್ಲಿ ವಿವರವಾಗಿ ಚರ್ಚೆ ನಡೆಸಲಾಗಿದೆ ಎಂದು ಸದಾನಂದಗೌಡ ಹೇಳಿದರು.
ಸ್ವಚ್ಛ ಬೆಂಗಳೂರು ಕಡೆಗೆ ಹೆಚ್ಚು ಗಮನ ಹರಿಸಬೇಕು. ರೈಲ್ವೆ ಜಾಗಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೆತ್ತಿಕೊಳ್ಳಲು ರೈಲ್ವೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಅವಕಾಶ ನೀಡಲಾಗಿದೆ. ರೈಲ್ವೆ ಇಲಾಖೆಯು ಸಾರ್ವಜನಿಕರ ಉಪಯೋಗಕ್ಕೆ ಬೇಕಾಗಿರುವ ಕೆಲಸಕ್ಕೆ ಅಡೆತಡೆ ಮಾಡದಂತೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು. ರೈಲ್ವೆ ಅಂಡರ್‌ಪಾಸ್ ಹಾಗೂ ಮೇಲ್ಸೆತುವೆಗಳ ನಿರ್ಮಾಣಕ್ಕೆ ಮುಖ್ಯಮಂತ್ರಿ ನೇತೃತ್ವದಲ್ಲಿ ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜನಪ್ರತಿನಿಧಿಗಳ ಸಭೆಯನ್ನು ಕರೆದು ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗುವುದು ಎಂದರು.
ಬೆಂಗಳೂರಿನ ಐದಾರು ಕಡೆ ಅಂಡರ್‌ಪಾಸ್ ಹಾಗೂ ಮೇಲ್ಸೆತುವೆ ಗಳ ನಿರ್ಮಾಣದಿಂದ ಶೇ.15ರಷ್ಟು ವಾಹನದಟ್ಟಣೆಯನ್ನು ಕಡಿಮೆ ಮಾಡಬಹುದು. ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಆದ್ಯತೆ ನೀಡುವಂತೆ ಒಂದು ವಾರದೊಳಗೆ ಕೇಂದ್ರ ರೈಲ್ವೆ ಸಚಿವರು ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದು ಸದಾನಂದಗೌಡ ತಿಳಿಸಿದರು.
ಸಮನ್ವಯ ಸಮಿತಿ: ರೈಲ್ವೆ ಇಲಾಖೆಗೆ ಸಂಬಂಧಿಸಿದ ಯೋಜನೆಗಳು ಹಾಗೂ ಕಾಮಗಾರಿಗಳಿಗೆ ಚುರುಕುಮುಟ್ಟಿಸಲು ಮೂಲಸೌಕರ್ಯ ಅಭಿವೃದ್ಧಿ ಸಚಿವರ ನೇತೃತ್ವದಲ್ಲಿ, ಶಾಸಕರು, ಸ್ಥಳೀಯ ಜನಪ್ರತಿನಿಧಿ ಗಳು, ರೈಲ್ವೆ ಅಧಿಕಾರಿಗಳನ್ನು ಒಳಗೊಂಡ ಸಮನ್ವಯ ಸಮಿತಿ ರಚಿಸಲು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಸಚಿವ ಕೃಷ್ಣ ಭೈರೇಗೌಡ, ಶಾಸಕರಾದ ಡಾ.ಸಿ.ಎನ್.ಅಶ್ವಥನಾರಾಯಣ, ಎಸ್.ಮುನಿರಾಜು, ವೈ.ಎ.ನಾರಾಯಣಸ್ವಾಮಿ, ಎಸ್.ಆರ್.ವಿಶ್ವನಾಥ್, ರೈಲ್ವೆ ಹಾಗೂ ಬಿಬಿಎಂಪಿ ಅಧಿಕಾರಿಗಳು ಉಪಸ್ಥಿತರಿದ್ದರು.
ರೈಲ್ವೆ ಇಲಾಖೆಗೆ ಸೇರಿದ ಜಾಗದಲ್ಲಿ ಒತ್ತುವರಿಯಾಗಿದ್ದರೆ ನಿರ್ದಾಕ್ಷಿಣ್ಯವಾಗಿ ತೆರವು ಮಾಡಬೇಕು. ರೈಲ್ವೆ ಹಳಿ ಅಥವಾ ಇಲಾಖೆಗೆ ಸೇರಿದ ಜಾಗದಲ್ಲಿ ಕಸ ಹಾಕುವವರನ್ನು ಕಡ್ಡಾಯವಾಗಿ ಶಿಕ್ಷೆಗೆ ಒಳಪಡಿಸುವ ಕಾರ್ಯಾಚರಣೆಯನ್ನು ನಾಳೆಯಿಂದಲೇ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ರೈಲ್ವೆ ಹಳಿಗಳ ಮೇಲೆ ಕಸ ಹಾಕದಂತೆ ತಡೆಯಲು ಕ್ರಮಕೈಗೊಳ್ಳಲಾಗುವುದು.
ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ







