ಕೆಕೆಎಂಎನಿಂದ ವಿದ್ಯಾರ್ಥಿ ವೇತನ, ಮನೆ ಹಸ್ತಾಂತರ
ಡಯಾಲಿಸಿಸ್ ಸೌಲಭ್ಯದ ಘೋಷಣೆ

ಮಂಗಳೂರು, ಸೆ.10: ಕುವೈತ್ ಕೇರಳ ಮುಸ್ಲಿಂ ಅಸೋಸಿಯೇಶನ್ (ಕೆಕೆಎಂಎ) ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ, ಬಡ ಕುಟುಂಬಕ್ಕೆ ಮನೆ ಹಸ್ತಾಂತರ ಕಾರ್ಯಕ್ರಮವು ಇಂದು ಕಂಕನಾಡಿಯ ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭ 15 ಮಂದಿ ವಿದ್ಯಾರ್ಥಿಗಳಿಗೆ 1.38 ಲಕ್ಷ ರೂ.ನ ವಿದ್ಯಾರ್ಥಿಗಳಿಗೆ ವೇತನವನ್ನು ವಿತರಿಸಲಾಯಿತು. ಸಜಿಪದಲ್ಲಿ ನೂತನವಾಗಿ ನಿರ್ಮಿಸಲಾದ ಮನೆಯ ಕೀಲಿಕೈಯನ್ನು ಹಾಜಿರಮ್ಮ ಎಂಬವರಿಗೆ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ವಕ್ಫ್ ಸಲಹಾ ಸಮಿತಿಯ ದ.ಕ. ಜಿಲ್ಲಾಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ವಿಶ್ವಾಸ್ ಬಾವ ಬಿಲ್ಡರ್‌ನ ಹಾಗೂ ಟಿಆರ್‌ಎಫ್‌ನ ಸ್ಥಾಪಕ ಅಬ್ದುರ್ರವೂಫ್ ಪುತ್ತಿಗೆ, ಹೈದರ್ ಪರ್ತಿಪ್ಪಾಡಿ, ಬಿ.ಎಸ್.ಶರ್ಫುದ್ದೀನ್ ಕುವೈತ್, ಕೆಕೆಎಂಎ ಇದರ ಕರ್ನಾಟಕದ ಸಲಹೆಗಾರ ಅಬ್ದುಲ್ ಹಮೀದ್, ಉಪಾಧ್ಯಕ್ಷ ನಝೀರ್ ಬೋಳಾರ್, ಕಾರ್ಯಾಧ್ಯಕ್ಷ ಅಯ್ಯೂಬ್ ಸೂರಿಂಜೆ, ಎಚ್‌ಐಎಫ್‌ನ ಅಧ್ಯಕ್ಷ ನಾಝಿಮ್ ಎಸ್.ಎಸ್., ಹಿದಾಯ ಫೌಂಡೇಶನ್ ಸ್ಥಾಪಕ ಖಾಸಿಂ ಅಹ್ಮದ್, ಹೋಪ್ ಫೌಂಡೇಶನ್‌ನ ಅಧ್ಯಕ್ಷ ಸೈಫ್ ಸುಲ್ತಾನ್, ರೆಕ್ಸೂ ಫೌಂಡೇಶನ್‌ನ ಅಧ್ಯಕ್ಷ ಅಬ್ದುಲ್ ಜಬ್ಬಾರ್, ಎಂ.ಫ್ರೆಂಡ್ಸ್‌ನ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು, ರಫೀಕ್ ಮಂಚಿ ಮೊದಲಾದವರು ಉಪಸ್ಥಿತರಿದ್ದರು.
ಪ್ರತಿ ರೋಗಿಗೆ 20 ಡಯಾಲಿಸ್ ಸೌಲಭ್ಯ
ಕೆಕೆಎಂಎ ಪ್ರಕಟಿಸಿದ ಯೋಜನೆಯಲ್ಲಿ ಡಯಾಲಿಸಿಸ್‌ನ ಅಗತ್ಯವಿರುವ 20 ಸಾವಿರ ರೋಗಿಗಳಿಗೆ ಸೌಲಭ್ಯವನ್ನು ಒದಗಿಸಲಾಗುವುದು. ಪ್ರತಿ ಡಯಾಲಿಸಿಸ್‌ಗೆ ತಗಲುವ 600 ರೂ.ವನ್ನು ಕೆಕೆಎಂಎ ವತಿಯಿಂದಲೇ ಆಸ್ಪತ್ರೆಗೆ ಪಾವತಿಸಲಾಗುವುದು. ಯೋಜನೆಯಲ್ಲಿ ಪ್ರತಿ ವ್ಯಕ್ತಿಗೆ 20 ಬಾರಿ ಡಯಾಲಿಸ್ (12,000 ರೂ. ವೆಚ್ಚದಲ್ಲಿ) ಮಾಡಿಸಿಕೊಳ್ಳುವ ಅವಕಾಶವಿದ್ದು, ಎಲ್ಲ ಖರ್ಚನ್ನು ಕೆಕೆಎಂಎ ಭರಿಸಲಿದೆ ಎಂದು ಕೆಕೆಎಂಎ ರಾಜ್ಯ ಸಂಯೋಜಕ ಎಸ್.ಎಂ.ಫಾರೂಕ್ ತಿಳಿಸಿದ್ದಾರೆ.
ಬಡ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡುವ ಕೆಕೆಎಂಎನ ಯೋಜನೆಗಳು ಮುಂದುವರಿಯಲಿದ್ದು, ಅದರ ಭಾಗವಾಗಿ ಬಿ.ಸಿ.ರೋಡ್‌ನಲ್ಲಿ ಮನೆಯೊಂದು ನಿರ್ಮಾಣ ಹಂತದಲ್ಲಿದೆ. ಮುಲ್ಲರಪಟ್ನ ಮತ್ತು ಬಜಾಲ್‌ನಲ್ಲಿ ಮನೆಯನ್ನು ನಿರ್ಮಿಸುವ ಯೋಜನೆ ಇದೆ ಎಂದು ಎಸ್.ಎಂ.ಫಾರೂಕ್ ತಿಳಿಸಿದರು.
ಫಲಕ್ ಫಾರೂಕ್ ಕುರ್‌ಆನ್ ಪಠಿಸಿದರು. ಆದಂ ಆಹಿಲ್ ಫಾರೂಕ್ ಅನುವಾದಿಸಿದರು.





