ಸಮಾಜದ ಬದಲಾವಣೆಗೆ ‘ನಾಗರಿಕ ಪತ್ರಿಕೋದ್ಯಮ’ಕ್ಕೆ ಒತ್ತು: ರಾಜ್‌ದೀಪ್ ಸರ್ದೇಸಾಯಿ ಆಶಯ

ಮಣಿಪಾಲ, ಸೆ.10: ಇಂದು ಸುದ್ದಿ ಹಾಗೂ ಮಾಹಿತಿ ಎಂಬುದು ಕೆಲವೇ ಮಂದಿಯವಿಶೇಷ ಹಕ್ಕಾಗಿ ಉಳಿದಿಲ್ಲವಾದ ಕಾರಣ ಸಮಾಜದಲ್ಲಿ ಬದಲಾವಣೆ ಗಾಗಿ ನಾಗರಿಕ ಪತ್ರಿಕೋದ್ಯಮ(ಸಿಟಿಝನ್ ಜರ್ನಲಿಸಮ್)ವನ್ನು ಮಾಧ್ಯಮಗಳು ಬಳಸಿಕೊಳ್ಳಬೇಕು ಎಂದು ದೇಶದ ಅಗ್ರಮಾನ್ಯ ಪತ್ರಕರ್ತರಲ್ಲಿ ಒಬ್ಬರಾದ ರಾಜ್‌ದೀಪ್ ಸರ್ದೇಸಾಯಿ ಅಭಿಪ್ರಾಯಪಟ್ಟಿದ್ದಾರೆ.
ಮಣಿಪಾಲದ ಸ್ಕೂಲ್ ಆಫ್ ಕಮ್ಯುನಿಕೇಷನ್ ವತಿಯಿಂದ ಮಣಿಪಾಲದ ಗಂಗಾಬಾಯಿ ಹಾನಗಲ್ ಸಭಾಂಗಣದಲ್ಲಿ ಇಂದು ಸಂಜೆ ಆಯೋಜಿಸ ಲಾದ ಪತ್ರಕರ್ತ ದಿ.ಎಂ.ವಿ.ಕಾಮತ್ ದತ್ತಿನಿಧಿ ಉಪನ್ಯಾಸ ಮಾಲಿಕೆಯಲ್ಲಿ ‘ಸಮಾಜದ ಬದಲಾವಣೆಯಲ್ಲಿ ಮಧ್ಯವರ್ತಿಗಳಾಗಿ ಮಾಧ್ಯಮಗಳು’ ಎಂಬ ವಿಷಯದ ಕುರಿತು ಅವರು ಮಾತನಾಡುತಿದ್ದರು.
ಒಂದು ಕಾಲದಲ್ಲಿ ಪತ್ರಕರ್ತರು ವಿಷಯ ಮತ್ತು ಅಕ್ಷರದ ಪಕ್ಷಪಾತಿಯಾಗಿದ್ದರು. ಆದರೆ ಇಂದು ಪತ್ರಕರ್ತರು ಎಲ್ಲದಕ್ಕೂ ತಮ್ಮ ಬಳಿ ಉತ್ತರಗಳಿದ್ದು, ಉಳಿದವರು ಕೇವಲ ಪ್ರಶ್ನೆಗಳನ್ನು ಮಾತ್ರ ಕೇಳಬೇಕು ಎಂದು ನಂಬಿದ್ದಾರೆ. ಇಂದು ಪತ್ರಕರ್ತರು ಬಣಗಳಲ್ಲಿ ಹಂಚಿಹೋಗಿದ್ದು, ಧ್ರುವೀಕರಣ ಗೊಂಡಿದ್ದಾರೆ.
ಈಗ ಪತ್ರಕರ್ತರನ್ನು ದೇಶಪ್ರೇಮಿ-ದೇಶದ್ರೋಹಿ, ಜಾತ್ಯತೀತ-ನಕಲಿ (ಸ್ಯುಡೋ) ಜಾತ್ಯತೀತ, ಉದಾರವಾದಿ-ನಕಲಿ ಉದಾರವಾದಿ ಎಂದು ಗುರುತಿಸಲಾಗುತ್ತಿದೆ. ಇದರೊಂದಿಗೆ ಸಮಾಜದಲ್ಲಿರುವ ವೈಷಮ್ಯತೆ ಸಾಮಾನ್ಯ ಪತ್ರಕರ್ತನಲ್ಲಿ ಗಂಭೀರ ವಿಶ್ವಾಸಾರ್ಹತೆ ಬಿಕ್ಕಟ್ಟನ್ನು ಸೃಷ್ಟಿಸಿದೆ ಎಂದವರು ಆತಂಕ ವ್ಯಕ್ತಪಡಿಸಿದರು.
ಒಳ್ಳೆಯ ಪತ್ರಕರ್ತನನ್ನು ಸಮಾಜವೇ ರೂಪಿಸುತ್ತದೆ. ಆದರೆ ಇಂದು ಸಮಾಜದಲ್ಲಿ ಉಳಿದೆಲ್ಲಾ ಕ್ಷೇತ್ರಗಳಲ್ಲಿರುವ ಆಮಿಷಕ್ಕೆ ಪತ್ರಕರ್ತನೂ ಸುಲಭದಲ್ಲಿ ಬಲಿಯಾಗುತಿದ್ದಾನೆ. ಇದು ಅಧಿಕಾರದ ರೂಪದಲ್ಲಿರಬಹುದು ಅಥವಾ ಹಣದ ರೂಪದಲ್ಲೂ ಇರಬಹುದು. ವರ್ಷ ಕಳೆದಂತೆ ಪತ್ರಕರ್ತರು ವೃತ್ತಿಯ ಅವನತಿಗೆ ಕಾರಣರಾಗುತಿದ್ದಾರೆ. ಇಂದು ಪುರಾವೆ ಮತ್ತು ಅಭಿಪ್ರಾಯದ ನಡುವಿನ ಗೆರೆಯೇ ತೆಳುವಾಗುತ್ತಿದೆ ಎಂದರು.
ಕಾಶ್ಮೀರ ಸಮಸ್ಯೆ:
ಇದಕ್ಕೆ ಪ್ರಕ್ಷುಬ್ಧಗೊಂಡಿರುವ ಕಾಶ್ಮೀರ ಸಮಸ್ಯೆಯನ್ನು ಉದಾಹರಣೆಯಾಗಿ ನೀಡಿದ ಅವರು ಕಾಶ್ಮೀರದಲ್ಲಿ ಇಂದಿರುವ ನೈಜಸ್ಥಿತಿ ಹಾಗೂ ಮಾಧ್ಯಮಗಳಲ್ಲಿ ಪ್ರತಿಫಲಿತವಾಗುವ ಕಾಶ್ಮೀರವನ್ನು ವಿವರಿಸಿದರು. ದುರಾದೃಷ್ಟದ ವಿಷಯವೆಂದರೆ ಕಾಶ್ಮೀರದಲ್ಲಿ ನಿಜವಾಗಿಯೂ ಏನು ನಡೆಯುತ್ತಿದೆ ಎಂಬುದು ಇಂದು ಓದುಗರ ಅಥವಾ ವೀಕ್ಷಕರ ಮುಂದೆ ಪ್ರಸ್ತುತಗೊಳ್ಳುತ್ತಲೇ ಇಲ್ಲ. ನಿಜವಾದ ಒಬ್ಬ ಪತ್ರಕರ್ತ ತನ್ನ ಅಭಿಪ್ರಾಯಗಳನ್ನು ಹೇರದೇ ಬೇರೆ ಬೇರೆ ಧ್ವನಿಗಳಿಗೆ ಅವಕಾಶ ನೀಡುವ ಸಾಮರ್ಥ್ಯ ಹಾಗೂ ಧೈರ್ಯವನ್ನು ಹೊಂದಿರಬೇಕು. ಆದರೆ ಕಾಶ್ಮೀರ ಸಮಸ್ಯೆಯಂಥ ಗಂಭೀರ ವಿಷಯವನ್ನು ನಾವು ಕಪ್ಪು-ಬಿಳುಪು ರೂಪದಲ್ಲಿ ತೋರಿಸುತ್ತಿದ್ದೇವೆ ಎಂದವರು ಕಳವಳ ವ್ಯಕ್ತಪಡಿಸಿದರು.
ಅದೇ ರೀತಿ ಜೆಎನ್‌ಯು ಹಾಗೂ ಕನ್ಹಯ್ಯ ಕುಮಾರ್ ವಿಷಯದಲ್ಲೂ ಮಾದ್ಯಮಗಳ ಪಾತ್ರವನ್ನು ಟೀಕಿಸಿದ ರಾಜ್‌ದೀಪ್, ಇಂದು ಸತ್ಯ ಎಂಬುದನ್ನು ಭಾವೋದ್ರೇಕ, ಸುದ್ದಿಯನ್ನು ಗದ್ದಲ ಸ್ಥಾನಪಲ್ಲಟಗೊಳಿಸಿವೆ. ವಿಶ್ವಾಸಾರ್ಹತೆಯ ಸ್ಥಾನವನ್ನು ಅವ್ಯವಸ್ಥೆ ತುಂಬಿದ್ದು, ಟಿಆರ್‌ಪಿ ಎಂಬುದು ಮಂತ್ರದಂಡದಂತೆ ಭಾಸವಾಗುತ್ತಿದೆ. ಜನಸಾಮಾನ್ಯರಿಗೆ ಸಂಬಂಧಪಟ್ಟ ನಿಜವಾದ ಸುದ್ದಿ, ಸಮಸ್ಯೆಗಳು ಇಂದು ಮಾಧ್ಯಮಗಳ ಪಾಲಿಗೆ ಸುದ್ದಿಯಾಗಿ ಗೋಚರಿಸುತ್ತಲೇ ಇಲ್ಲ ಎಂದವರು ವಿಷಾಧಿಸಿದರು.
ಸಮಾಜದಲ್ಲಿ ಆಳವಾಗಿ ಬೇರುಬಿಟ್ಟಿರುವ ಅಸಮಾನತೆ, ಅಸ್ಪಶ್ಯತೆ, ಹಿಂಸೆ, ಭ್ರಷ್ಟಾಚಾರ, ಬುಡಕಟ್ಟು ಪ್ರದೇಶಗಲ್ಲಿರುವ ಪ್ರಕ್ಷುಬ್ಧತೆ ಮಾಧ್ಯಮಗಳ ಕಣ್ಣಿಗೆ ಬೀಳುವುದೇ ಇಲ್ಲ. ಆಶಾವಾದ ಹಾಗೂ ಸಿನಿಕತೆ ಇಂದು ಒಟ್ಟಿಗಿದೆ. ದೇಶ ಬದಲಾಗುತ್ತಿದೆ ಎಂದು ಬೊಬ್ಬೆ ಹೊಡೆಯಲಾಗುತ್ತಿದೆ. ಆದರೆ ಇದು ಟಿವಿ ಸ್ಟುಡಿಯೊಗಳಲ್ಲಿ ಎಲ್ಲಿಯೂ ಕಾಣಿಸುತ್ತಿಲ್ಲ ಎಂದವರು ವ್ಯಂಗ್ಯವಾಡಿದರು.
ಇಂಥ ನಿರಾಶಾದಾಯಕ ಸನ್ನಿವೇಶದಲ್ಲಿ ಆಶಾವಾದದ ಕಿರಣದ ರೂಪದಲ್ಲಿ ಬದಲಾವಣೆಯ ಏಜೆಂಟ್ ಆಗಿ ಕಾಣಿಸಿಕೊಳ್ಳುವುದು ಸ್ಥಳೀಯ ಪತ್ರಿಕೆಗಳು ಹಾಗೂ ಮಾಧ್ಯಮಗಳು. ನಾವಿಂದು 360 ಡಿಗ್ರಿ ಮೀಡಿಯಾ ಯುಗದಲ್ಲಿದ್ದೇವೆ. ಇವುಗಳನ್ನು ಜಾಣತನದಿಂದ ಬಳಸಿಕೊಂಡರೆ, ಇವುಗಳ ಸಾಮಾಜಿಕ ಬದಲಾವಣೆಯ ಹರಿಕಾರರಾಗುವ ಎಲ್ಲಾ ಸಾಧ್ಯತೆಗಳಿವೆ. ಪೆಯ್ಡ್ ನ್ಯೂಸ್ ಎಂಬುದು ನೈಜತೆಯಾದರೂ, ಸಮಾಜವೆಂಬ ಪಿರಮಿಡ್‌ನ ತುದಿಯಲ್ಲಿರುವ ವರ ಮೇಲೆ ಪ್ರಖರ ಬೆಳಕು ಬಿದ್ದಾಗಲಷ್ಟೇ ಬದಲಾವಣೆ ಕಾಣಬಹುದು ಎಂದರು.
ಬ್ರಿಟಿಷರಿಂದ ಬಳುವಳಿಯಾಗಿ ಬಂದ ದೇಶದ್ರೋಹ ಹಾಗೂ ಮಾನನಷ್ಟ ಮೊಕದ್ದಮೆಗಳು ಮಾಧ್ಯಮಗಳ ಪಾಲಿಗೆ ಈಗಲೂ ಕಂಟಕವಾಗಿ ಉಳಿದಿವೆ. ಇದರಿಂದಾಗಿಯೇ ಮಾಧ್ಯಮಗಳು ತನಿಖಾ ಪತ್ರಿಕೋದ್ಯಮದಿಂದ ಹಿಂದೆ ಸರಿಯುವಂತಾಗಿದೆ. ವೆಬ್‌ಸೈಟ್ ಮತ್ತು ನ್ಯೂಸ್ ಆ್ಯಪ್‌ಗಳು ಮುಂಬರುವ ದಿನಗಳಲ್ಲಿ ಅಚ್ಚರಿದಾಯಕ ಫಲಿತಾಂಶಗಳನ್ನು ನೀಡಬಹುದು. ವಿಷಯ ಹಾಗೂ ತಂತ್ರಜ್ಞಾನದ ಸಂಯೋಜನೆ ಮಾಧ್ಯಮಗಳಲ್ಲಿ ಆಸಕ್ತಿಕರ ಬದಲಾವಣೆಗೆ ಕಾರಣವಾಗಬಹುದು. ಇಂಥವಲ್ಲಿ ನಾಗರಿಕ ಪತ್ರಿಕೋದ್ಯಮ ವಿಶೇಷ ಪಾತ್ರ ವಹಿಸಬಹುದು. ಸೋಷಿಯಲ್ ಮೀಡಿಯಾ ಸಮಾಜದ ಬದಲಾವಣೆಯಲ್ಲಿ ಗುರುತರವಾದ ಕಾಣಿಕೆ ನೀಡುವ ಸಾಧ್ಯತೆ ಇದೆ ಎಂದರು.
ಮಣಿಪಾಲ ವಿವಿ ಚಾನ್ಸಲರ್ ಡಾ.ರಾಮದಾಸ ಎಂ.ಪೈ ಅಧ್ಯಕ್ಷತೆ ವಹಿಸಿದ್ದರು. ಸಿಂಡಿಕೇಟ್ ಬ್ಯಾಂಕಿನ ಜಿಎಂ ಸತೀಶ್ ಕಾಮತ್ ಉಪಸ್ಥಿತರಿದ್ದರು. ಎಸ್‌ಒಸಿಯ ನಿರ್ದೇಶಕಿ ಡಾ.ನಂದಿನಿ ಲಕ್ಷೀಕಾಂತ ಸ್ವಾಗತಿಸಿದರೆ, ಸಹ ನಿರ್ದೇಶಕಿ ಡಾ.ಸುಧಾರಾಣಿ ಎಂ.ವಿ.ಕಾಮತ್‌ರ ಸಂಸ್ಮರಣೆ ಮಾಡಿದರು. ಡಾ.ಶುಭಾ ವಂದಿಸಿದರು.
ರಾಷ್ಟ್ರವಾದಿಗೆ ಧೈರ್ಯಬೇಕು
ಸಂವಾದದಲ್ಲಿ ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ರಾಜ್‌ದೀಪ್, ನಿಜವಾದ ರಾಷ್ಟ್ರವಾದಿಗೆ ರಾಜ ಬೆತ್ತಲೆಯಾಗಿರುವುದನ್ನು ಹೇಳುವ ಧೈರ್ಯ ಇರಬೇಕು. ದೇಶಪ್ರೇಮ ಎಂಬುದು ಯಾರೊಬ್ಬರ ಏಕಸ್ವಾಮ್ಯವಲ್ಲ ಎಂದರು.
ನ್ಯೂಯಾರ್ಕ್‌ನ ಮೆಡ್ಸನ್ ಸ್ಕ್ವಾರ್‌ಗಾರ್ಡನ್‌ನಲ್ಲಿ ನಡೆದ ಘಟನೆಯ (ಪ್ರಧಾನಿ ನರೇಂದ್ರ ಮೋದಿ ಭಾಷಣದ ವೇಳೆ) ಕುರಿತು ಮಾತನಾಡಿದ ಅವರು, 14 ವರ್ಷಗಳ ಹಿಂದೆ ಗುಜರಾತ್ ಗಲಭೆ ಕುರಿತ ವರದಿಗೆ ನನ್ನನ್ನು ಹೊಣೆಗಾರರನ್ನಾಗಿ ಯಾಕೆ ಮಾಡಬೇಕು ಎಂದವರು ಪ್ರಶ್ನಿಸಿದರು. ನಾನು ಅಲ್ಲಿ ನನ್ನ ಹೇಳಿಕೆಗೆ, ನನಗೆ ವರದಿಗಾಗಿ ಕ್ಷಮೆಯಾಚಿಸಿಲ್ಲ. ಸುದ್ದಿ ಮಾಡಬೇಕಾದ ನಾನೇ ಸುದ್ದಿಯಾಗಿರುವುದಕ್ಕೆ ಕ್ಷಮೆಯಾಚಿಸಿದ್ದೆ ಎಂದರು.







