ಕೂದಲೆಳೆಯಿಂದ ಕಂಚು ಕಳೆದುಕೊಂಡ ಸಂದೀಪ್
ರಿಯೋ ಡಿಜನೈರೊ, ಸೆ.10: ಜಾವೆಲಿನ್ ಎಸೆತಗಾರ ಸಂದೀಪ್ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಕೂದಲೆಳೆ ಅಂತರದಿಂದ ಕಂಚಿನ ಪದಕ ತಪ್ಪಿಸಿಕೊಂಡು ಐತಿಹಾಸಿಕ ಸಾಧನೆ ಮಾಡುವುದರಿಂದ ವಂಚಿತರಾದರು.
ಶನಿವಾರ ನಡೆದ ಪುರುಷರ ಎಫ್44 ವಿಭಾಗದಲ್ಲಿ 20ರ ಪ್ರಾಯದ ಸಂದೀಪ್ 54.30 ಮೀ. ದೂರ ಜಾವೆಲಿನ್ ಎಸೆಯುವುದರೊಂದಿಗೆ ನಾಲ್ಕನೆ ಸ್ಥಾನ ಪಡೆದರು. ಸ್ಪರ್ಧೆಯ ಆರಂಭದಲ್ಲಿ ಎರಡನೆ ಸ್ಥಾನದಲ್ಲಿದ್ದ ಸಂದೀಪ್ ಅಂತಿಮ ಹಂತದಲ್ಲಿ ಎಡವಿದರು.
ಚಿನ್ನದ ಪದಕ ಟ್ರಿನಿಡಾಡ್ ಹಾಗೂ ಟೊಬಾಬೊದ ಸ್ಟೀವರ್ಟ್ ಅಕೀಮ್ ಪಾಲಾಯಿತು. ಅಕೀಮ್ 57.32 ಮೀ. ದೂರ ಎಸೆದು ಜಾವೆಲಿನ್ ಎಸೆತದಲ್ಲಿ ವಿಶ್ವ ದಾಖಲೆ ನಿರ್ಮಿಸಿದರು. ಕೆನಡಾದ ಅಲಿಸ್ಟರ್ ಮೆಕ್‌ಕ್ವೀನ್(55.56 ಮೀ.) ಬೆಳ್ಳಿ ಹಾಗೂ ನ್ಯೂಝಿಲೆಂಡ್‌ನ ರೊರಿ ಮೆಕ್‌ಸ್ವೀನಿ(54.99 ಮೀ.) ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.
ಭಾರತದ ಮತ್ತೋರ್ವ ಸ್ಪರ್ಧಿ ನರೇಂದ್ರ ರಣಬೀರ್ 53.79 ಮೀ.ದೂರ ಜಾವೆಲಿನ್ ಎಸೆಯುವ ಮೂಲಕ 6ನೆ ಸ್ಥಾನ ಪಡೆದರು.
ಹೊಸದಿಲ್ಲಿಯ ಸಂದೀಪ್ ಬಡ ಕುಟುಂಬದಿಂದ ಬಂದವರು. ಕಾರು ಅಪಘಾತವೊಂದರಲ್ಲಿ ಬೆನ್ನುಮೂಳೆ ಮುರಿದಿತ್ತು. ಅಪಘಾತದ ಹೊರತಾಗಿಯೂ ಅವರು 2014ರಲ್ಲಿ ಜಾವೆಲಿನ್ ಕ್ರೀಡೆ ಆಯ್ದುಕೊಂಡಿದ್ದರು. 2016ರಲ್ಲಿ ಬರ್ಲಿನ್‌ನಲ್ಲಿ ನಡೆದಿದ್ದ ಐಪಿಸಿ ಅಥ್ಲೆಟಿಕ್ಸ್ ಗ್ರಾನ್‌ಪಿನಲ್ಲಿ ಚಿನ್ನದ ಪದಕ ಜಯಿಸಿದ್ದರು.





