ಭಾರತದಲ್ಲಿ 6 ಕೋಟಿ ಜನರಿಗೆ ಮಾನಸಿಕ ಕಾಯಿಲೆಗಳು
ಆಘಾತಕಾರಿ ಮಾಹಿತಿ
ಹೊಸದಿಲ್ಲಿ, ಸೆ.10: ಭಾರತದಲ್ಲಿ ಕನಿಷ್ಠ ಆರು ಕೋಟಿ ಜನರು ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಈ ಸಂಖ್ಯೆ ದಕ್ಷಿಣ ಆಫ್ರಿಕಾದ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚಾಗಿದ್ದು, ವೈದ್ಯರ ಕೊರತೆ ಅನುಭವಿಸುತ್ತಿರುವ ಹಾಗೂ ಮಾನಸಿಕ ಆರೋಗ್ಯ ಕ್ಷೇತ್ರಕ್ಕಾಗಿ ಸಾಕಷ್ಟು ಧನಸಹಾಯದ ಕೊರತೆಯೆದುರಿಸುತ್ತಿರುವ ಭಾರತದಲ್ಲಿ ಮತ್ತಷ್ಟು ಸಮಸ್ಯೆಗಳನ್ನು ಸೃಷ್ಟಿಸಬಹುದು ಎನ್ನಲಾಗಿದೆ.
ಲೋಕಸಭೆಗೆ ಈ ವರ್ಷದ ಮೇ ತಿಂಗಳಲ್ಲಿ ಮಾಹಿತಿ ನೀಡಿದ್ದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡ್ಡಾ, ನ್ಯಾಷನಲ್ ಕಮಿಷನ್ ಆನ್ ಮ್ಯಾಕ್ರೋ ಇಕನಾಮಿಕ್ಸ್ ಆ್ಯಂಡ್ ಹೆಲ್ತ್ 2005 ವರದಿಯೊಂದನ್ನು ಉಲ್ಲೇಖಿಸುತ್ತಾ, 1ರಿಂದ 2 ಕೋಟಿ ಭಾರತೀಯರು (ಜನಸಂಖ್ಯೆಯ ಶೇ. 1-2) ಸಿರೆಪ್ರೇನಿಯಾ ಹಾಗೂ ಬೈಪೋಲಾರ್ ಡಿಸಾರ್ಡರ್ ನಂತಹ ತೀವ್ರತರ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಹಾಗೂ ಸುಮಾರು 5 ಕೋಟಿ (ಜನಸಂಖ್ಯೆ ಶೇ.5) ಜನರು ಸಾಮಾನ್ಯ ಮಾನಸಿಕ ಸಮಸ್ಯೆಗಳಾದ ಖಿನ್ನತೆ ಹಾಗೂ ಆತಂಕದಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದರು.
ಭಾರತವು ಆರೋಗ್ಯ ಕ್ಷೇತ್ರಕ್ಕೆ ಮೀಸಲಿಟ್ಟ ಬಜೆಟ್ ಹಣದಲ್ಲಿ ಶೇ.0.06 ಮೊತ್ತವನ್ನು ಮಾನಸಿಕ ಆರೋಗ್ಯ ಕ್ಷೇತ್ರಕ್ಕೆ ಉಪಯೋಗಿಸುತ್ತಿದೆ. ಇದು ಬಾಂಗ್ಲಾದೇಶ ಮಾನಸಿಕ ಆರೋಗ್ಯ ಕ್ಷೇತ್ರಕ್ಕೆ ವಿನಿಯೋಗಿಸುವ ನಿಧಿ(ಶೇ.0.04)ಗಿಂತಲೂ ಕಡಿಮೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯೊಂದರ ಪ್ರಕಾರ ಹೆಚ್ಚಿನ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಮ್ಮ ಬಜೆಟ್‌ನ ಶೇ.4ಕ್ಕೂ ಹೆಚ್ಚು ಮೊತ್ತವನ್ನು ಮಾನಸಿಕ ಆರೋಗ್ಯ ಕ್ಷೇತ್ರಕ್ಕೆ ವಿನಿಯೋಗಿಸುತ್ತವೆ.
ಮಾನಸಿಕ ಸಮಸ್ಯೆಗಳಿಂದ ಆತ್ಮಹತ್ಯೆಗೈಯ್ಯುವ ಪ್ರಕರಣಗಳು 2010ರಲ್ಲಿದ್ದ ಶೇ.7ರಿಂದ 2014ರಲ್ಲಿ ಶೇ.5.4ಕ್ಕೆ ಇಳಿಕೆಯಾಗಿದ್ದರೂ, ಮಾನಸಿಕ ಸಮಸ್ಯೆಗಳಿಂದ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 7,000ಕ್ಕೂ ಹೆಚ್ಚು ಎಂದು ತಿಳಿದು ಬಂದಿದೆ.
ಸರಕಾರ ಈಗಾಗಲೇ ಬೆಂಗಳೂರಿನ ನಿಮ್ಹಾನ್ಸ್ ಮೂಲಕ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆ ಕಾರ್ಯಕ್ಕೆ ಕೈಹಾಕಿದ್ದು, 2015ರ ಜೂನ್ 1ರಂದು ಆರಂಭವಾದ ಈ ಸಮೀಕ್ಷೆಯ ಭಾಗವಾಗಿ 27,000 ಮಂದಿಯನ್ನು ಎಪ್ರಿಲ್ 5, 2016ರ ತನಕ ಸಂದರ್ಶಿಸಲಾಗಿದೆಯೆಂದು ಸಚಿವರು ಲೋಕಸಭೆಗೆ ತಿಳಿಸಿದ್ದರು. ಸಚಿವರು ನೀಡಿದ ಮಾಹಿತಿಯಂತೆ ಭಾರತದಲ್ಲಿ ಡಿಸೆಂಬರ್ 2015ರಲ್ಲಿರುವಂತೆ ಒಟ್ಟು 3,800 ಮಾನಸಿಕ ರೋಗ ತಜ್ಞರು, 898 ಕ್ಲಿನಿಕಲ್ ಮನಃಶಾಸ್ತ್ರಜ್ಞರು, 850 ಮಾನಸಿಕ ಆರೋಗ್ಯ ಕಾರ್ಯಕರ್ತರು ಹಾಗೂ 1,500 ಮಾನಸಿಕ ತಜ್ಞ ದಾದಿಯರು ಸೇವೆ ಸಲ್ಲಿಸುತ್ತಿದ್ದಾರೆ. ಇದನ್ನು ಗಣನೆಗೆ ತೆಗೆದುಕೊಂಡರೆ ಭಾರತದಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಗೆ ಒಬ್ಬ ಮಾನಸಿಕ ತಜ್ಞರು ಲಭ್ಯರಿದ್ದಾರಲ್ಲದೆ, ಭಾರತ ಒಟ್ಟು 66,200 ಮಾನಸಿಕ ತಜ್ಞರ ಕೊರತೆಯೆದುರಿಸುತ್ತಿದೆ.





