ತಾಜಾ ಕಾಣಲು ಮಾಡುವ ಆಘಾತಕಾರಿ ಕಸರತ್ತುಗಳು
‘ದಿ ಗ್ರೇಟ್ ಇಂಡಿಯನ್’ ತರಕಾರಿ ಹಗರಣ
ಹೊಸದಿಲ್ಲಿ, ಸೆ.10: ಸಿಲಿಕಾನ್ ಸ್ಪ್ರೇ, ಕಲರ್ ಡೈ ಹಾಗೂ ಚುಚ್ಚುಮದ್ದು-ತಾವು ಮಾರಾಟ ಮಾಡುವ ತರಕಾರಿಗಳು ತಾಜಾ ಕಾಣಲು ಕೆಲ ರೈತರು ಏನೆಲ್ಲಾ ಕಸರತ್ತು ಮಾಡುತ್ತಾರೆ ಗೊತ್ತೇ?
ಮುಂದಿನ ಬಾರಿ ನೀವು ಹಸಿ ಹಸಿ, ತಾಜಾ ತರಕಾರಿ ಖರೀದಿಸಲು ಹೊರಟಾಗ ಆ ತರಕಾರಿಗಳಿಗೆ ಏನನ್ನು ಸೇರಿಸಬಹುದೆನ್ನುವ ಬಗ್ಗೆ ಒಮ್ಮೆ ಯೋಚಿಸಿ. ಹೊಸದಿಲ್ಲಿಯ ಹೊರವಲಯದ ತರಕಾರಿ ಕೃಷಿಕರೊಬ್ಬರು ಬಹಿರಂಗಪಡಿಸಿರುವ ಮಾಹಿತಿ ನಿಜಕ್ಕೂ ಆಘಾತಕಾರಿ.ರೈತರು ತರಕಾರಿಗಳು ತಾಜಾ ಕಾಣುವಂತೆ ಮಾಡಲು ಉಪಯೋಗಿಸುವ ಕೆಲವೊಂದು ವಸ್ತುಗಳು, ಚುಚ್ಚುಮದ್ದುಗಳು ಹಾಗೂ ಸ್ಪ್ರೇಗಳ ಬಗ್ಗೆ ಈತ ಮಾಹಿತಿ ನೀಡಿದ್ದಾರೆ. ಈ ರೈತನ ಪ್ರಕಾರ ಈ ರೀತಿ ಮಾಡುತ್ತಿರುವವನು ತಾನೊಬ್ಬನೇ ಅಲ್ಲ. ಎಲ್ಲ ರೈತರೂ ಇದೇ ರೀತಿ ಮಾಡುತ್ತಾರೆ, ಎನ್ನುತ್ತಾನಾತ. ತನ್ನಂತಹ ಬಡ ರೈತರಿಗೆ ಈ ಹಣದುಬ್ಬರದ ಸಮಯದಲ್ಲಿ ತಮ್ಮ ಕುಟುಂಬಗಳನ್ನು ಸಲಹಲು ಇದನ್ನು ಹೊರತುಪಡಿಸಿ ಬೇರೆ ದಾರಿ ಕಾಣದಾಗಿದೆ ಎನ್ನುತ್ತಾನೆ ಈತ.
ಕೆಲವು ದಿನಗಳಷ್ಟು ಹಳೆಯದಾದ ತರಕಾರಿಗಳಿಗೆ ಸಿಲಿಕಾನ್ ಸ್ಪ್ರೇ ಹೊಳಪು ಹಾಗೂ ತಾಜಾತನದ ರೂಪ ನೀಡಿದರೆ, ಹಸಿರು ತರಕಾರಿಗಳಿಗೆ ಮ್ಯಾನುಫ್ಯಾಕ್ಚರಿಂಗ್ ಡೈ ಉಪಯೋಗಿಸಿ ಅವುಗಳು ಆಕರ್ಷಕವಾಗಿ ಕಾಣುವಂತೆ ಮಾಡಲಾಗುತ್ತದೆ. ಸೋರೆಕಾಯಿಯಂತಹ ತರಕಾರಿಗಳಿಗೆ ಒಕ್ಸಿಟೋಸಿನ್ ಚುಚ್ಚುಮದ್ದು ನೀಡಿ ಅವುಗಳು ರಾತ್ರಿ ಬೆಳಗಾಗುವುದರೊಳಗೆ ಗಾತ್ರದಲ್ಲಿ ದೊಡ್ಡದಾಗುವಂತೆ ಮಾಡಲಾಗುತದೆ. ಹೀಗೆ ಸೋರೆಕಾಯಿ ಪೂರ್ಣಪ್ರಮಾಣವಾಗಿ ಬೆಳೆಯಲು ಒಂದು ವಾರ ತೆಗೆದುಕೊಂಡರೆ ಈ ಮಾದರಿ ಅನುಸರಿಸಿ ಒಂದೇ ದಿನದಲ್ಲಿ ಅದನ್ನು ಮಾರಾಟಕ್ಕೆ ಕಳುಹಿಸಲಾಗುತ್ತದೆ.







