ಮೋದಿ ಉದ್ಯಮಿಗಳ ಋಣ ಸಂದಾಯದಲ್ಲಿ ಮಗ್ನರಾಗಿದ್ದಾರೆ
ಉತ್ತರ ಪ್ರದೇಶದಲ್ಲಿ ರಾಹುಲ್ ವಾಗ್ದಾಳಿ
ಲಕ್ನೊ, ಸೆ.10: ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಅಭಿಯಾನಕ್ಕೆ ನಿಧಿಯೊದಗಿಸಿದ್ದ ವ್ಯಾಪಾರಿಗಳ ಸಾಲ ತೀರಿಸುವಲ್ಲಿ ತಲ್ಲೀನರಾಗಿದ್ದಾರೆ. ಅವರಿಗೆ ರೈತರ ಸಾಲದ ಬಗ್ಗೆ ಆಸಕ್ತಿಯಿಲ್ಲವೆಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಆರೋಪಿಸಿದ್ದಾರೆ.
ದೇಶದಲ್ಲಿ ದಯನೀಯ ಸ್ಥಿತಿಯಲ್ಲಿರುವ ರೈತರ ಬಗ್ಗೆ ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರಕ್ಕೆ ಕಾಳಜಿಯಿಲ್ಲವೆಂದು ಅವರು ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಪಕ್ಷದ ಸರಕಾರ ಬಂದರೆ, ತಾವು ರೈತರ ಎಲ್ಲ ಸಾಲಗಳನ್ನು ಮನ್ನಾ ಮಾಡುತ್ತೇವೆ ಎಂದ ರಾಹುಲ್, 2014ರ ಲೋಕಸಭಾ ಚುನಾವಣೆಯ ವೇಳೆ ಮೋದಿ ನೀಡಿದ್ದ ವಾಗ್ದಾನವನ್ನು ಲೇವಡಿ ಮಾಡಿದ್ದಾರೆ.
ನಿಮ್ಮ ಬ್ಯಾಂಕ್ ಖಾತೆಗಳಿಗೆ ರೂ. 15 ಲಕ್ಷ ಬಂದಿದೆಯೇ? ಎಂದು ಜನರನ್ನು ಪ್ರಶ್ನಿಸಿದ ಅವರು, ರ್ಯಾಲಿಯಲ್ಲಿದ್ದ ಜನ ‘ಇಲ್ಲ’ ಎಂದಾಗ, ಪ್ರಧಾನಿ ವಾಸ್ತವವಾಗಿ ರೂ.15 ಲಕ್ಷ ಬೆಲೆಯ ಸೂಟ್‌ಗಳನ್ನು ಧರಿಸುತ್ತಾರೆಂದು ಹೇಳಿದ್ದಾರೆ.
ಈ ಮೊದಲು, ಅಂಬೇಡ್ಕರ್ ನಗರದ ಮಾಲಿಪುರದಲ್ಲಿ ರಾಜ್ಯದ ಎಸ್ಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್, ರಾಜ್ಯದ ಹಲವು ಪ್ರದೇಶಗಳಲ್ಲಿ ವಿದ್ಯುತ್ತೇ ಇಲ್ಲದಿದ್ದರೂ, ಜನರಿಗೆ ಭಾರೀ ಮೊತ್ತದ ವಿದ್ಯುತ್ ಬಿಲ್‌ಗಳು ಬರುತ್ತಿವೆಯೆಂದು ಆರೋಪಿಸಿದ್ದರು.
ಎಲ್ಲರನ್ನೂ ಸಂಪತ್ತಿನ ಹಾದಿಯಲ್ಲಿ ಜೊತೆಗೆ ಒಯ್ಯುವ ಭರವಸೆಯನ್ನು ಜನರಿಗೆ ನೀಡಿದ ಅವರು, ರಾಜ್ಯವು ಸಂಪದ್ಭರಿತವಾಗಲು ಜನರು ಬಯಸುತ್ತಾರಾದರೆ ಕಾಂಗ್ರೆಸ್‌ಗೆ ಮತ ನೀಡಬೇಕು ಎಂದಿದ್ದರು.





