ಎರಡು ದಿನಗಳ ಹಿಂದೆ ಪ್ರಯೋಗಾಲಯಕ್ಕೆ ಪರವಾನಿಗೆ!
ಹರ್ಯಾಣದ ಗೋಮಾಂಸ ಪರೀಕ್ಷೆ ಪ್ರಹಸನ
ಮೆವಾತ್(ಹರ್ಯಾಣ), ಸೆ.10: ಇಲ್ಲಿನ ಪೊಲೀಸರು ವಶಪಡಿಸಿಕೊಂಡಿದ್ದ ಬಿರಿಯಾನಿ ಮಾದರಿಗಳ ಪರೀಕ್ಷೆ ನಡೆಸಿರುವ ಪಶು ವೈದ್ಯಕೀಯ ಹಾಗೂ ಪ್ರಾಣಿ ವಿಜ್ಞಾನ ವಿಶ್ವವಿದ್ಯಾನಿಲಯಕ್ಕೆ ಮಾದರಿಗಳನ್ನು ಕಳುಹಿಸಿದ ಕೇವಲ 2 ದಿನಗಳ ಮೊದಲಷ್ಟೇ ರಾಜ್ಯ ಸರಕಾರವು ಪರವಾನಿಗೆ ನೀಡಿತ್ತು.
ಈ ವಿಷಯ ಇಂದು ಬೆಳಕಿಗೆ ಬಂದಿದೆ. ಬಿರಿಯಾನಿಯ 7 ಮಾದರಿಗಳಲ್ಲಿ ಗೋಮಾಂಸ ಪತ್ತೆಯಾಗಿದೆಯೆಂದು ವಿವಿಯ ಉಪಕುಲಪತಿ ಮೇ.ಜ. ಶ್ರೀಕಾಂತ್ ನಿನ್ನೆಯಷ್ಟೇ ಘೋಷಿಸಿದ್ದರು.
ಎನ್‌ಡಿಟಿವಿಯೊಂದಿಗೆ ಮಾತನಾಡಿದ ಅವರು, ಹರ್ಯಾಣದ ಯಮುನಾ ತೀರದ ಹಾಗೂ ಫರೀದಾಬಾದ್‌ಗಳಲ್ಲಿ ಎರಡು ಪ್ರಯೋಗಾಲಯಗಳು ನಿರ್ಮಾಣ ಹಂತದಲ್ಲಿವೆ. ಅವುಗಳಲ್ಲಿಯೂ ಗೋಮಾಂಸ ಪರೀಕ್ಷೆಯ ವ್ಯವಸ್ಥೆ ಕಲ್ಪಿಸಲಾಗುವುದು. ಅಲ್ಲಿಯವರೆಗೆ ವಿವಿಯ ಪ್ರಯೋಗಾಲಯ ಪರೀಕ್ಷೆ ನಡೆಸುತ್ತದೆಂದು ತಿಳಿಸಿದ್ದಾರೆ.
ಹಿಸಾರ್ ನಗರದಲ್ಲಿರುವ ರಾಜ್ಯ ವಿವಿಯ ಆವರಣದಲ್ಲಿರುವ ವಿಶಾಲವಾದ ಪ್ರಯೋಗಾಲಯವು ಬಿಡುವಿಲ್ಲದ ಕೆಲಸ ಪಡೆದಿದೆ. ಅದರ ಪ್ರಧಾನ ಕೆಲಸ ವೈರಾಲಜಿಯಲ್ಲಿ ಸಂಶೋಧನೆ ಹಾಗೂ ಪ್ರಾಣಿಗಳ ಕಾಯಿಲೆಗಳಿಗೆ ಔಷಧ ಕಂಡುಹಿಡಿಯುವುದಾಗಿದ್ದರೂ, ಅದು ಗೋಮಾಂಸ ಪರೀಕ್ಷೆಗಾಗಿ ರಾಜ್ಯ ಸರಕಾರ ಕಳುಹಿಸುವ ಅಪಾರ ಸಂಖ್ಯೆಯ ಮಾಂಸದ ಮಾದರಿಗಳ ಪರೀಕ್ಷೆಯನ್ನೂ ನಡೆಸುತ್ತದೆ. ಈ ಮೊದಲು ಪ್ರಯೋಗಾಲಯಕ್ಕೆ ಗೋಮಾಂಸ ಪರೀಕ್ಷೆಗಾಗಿ ಕಡಿಮೆ ಸಂಖ್ಯೆಯಲ್ಲಿ ಮಾದರಿಗಳು ಬರುತ್ತಿದ್ದವು.





