ನಿಗೂಢ ಕಾಯಿಲೆಗೆ 6 ಬುಡಕಟ್ಟು ಮಕ್ಕಳು ಬಲಿ
ಗುಜರಾತ್:
ಪಾಲನ್‌ಪುರ(ಗುಜರಾತ್), ಸೆ.10: ರಾಜ್ಯದ ಬಾಣಸ್‌ಕಂಠ ಬುಡಕಟ್ಟು ಪ್ರದೇಶಗಳಲ್ಲಿ ನಿಗೂಢ ಕಾಯಿಲೆಯೊಂದರಿಂದ ಮೂರು ವಾರಗಳಲ್ಲಿ 2 ಹಾಗೂ 11ರ ಹರೆಯದ ನಡುವಿನ 6 ಮಕ್ಕಳು ಸಾವನ್ನಪ್ಪಿದ್ದಾರೆ.
ಮಕ್ಕಳಿಗೆ ಗಂಟಲು ನೋವು, ತೀವ್ರ ಜ್ವರ ಹಾಗೂ ಮೂರ್ಛೆಯ ಲಕ್ಷಣಗಳಿದ್ದವು. ಎಲ್ಲ ಮಕ್ಕಳೂ ಅಮೀರ್‌ಗಡ ತಹಸೀಲ್‌ನ ಗಂಗು ಹಾಗೂ ಖುನಿಯಾ ಗ್ರಾಮದವರಾಗಿದ್ದರು. ವೈದ್ಯರಿಂದ ರೋಗವನ್ನು ಗುರುತಿಸಲು ಸಾಧ್ಯವಾಗಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿಗೂಢ ಕಾಯಿಲೆಗೆ ಈ ವರೆಗೆ 6 ಮಕ್ಕಳು ಬಲಿಯಾಗಿದ್ದಾರೆ. ತಾವು ಈ ಮಕ್ಕಳ ಗಂಟಲ ದ್ರವದ ಮಾದರಿಗಳನ್ನು ವಿವಿಧ ಆಸ್ಪತ್ರೆಗಳಿಗೆ ಕಳುಹಿಸಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆಂದು ಜಿಲ್ಲಾ ಕಲೆಕ್ಟರ್ ಜೆನು ದೇವನ್ ಹೇಳಿದ್ದಾರೆ.
ಗುಜರಾತ್‌ನ ಆರೋಗ್ಯ ಸಚಿವ ಶಂಕರ್ ಚೌಧರಿ ಶುಕ್ರವಾರ ಸಂತ್ರಸ್ತ ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ಕಾಯಿಲೆಯ ಅಧ್ಯಯನಕ್ಕಾಗಿ ತಜ್ಞ ವೈದ್ಯರ ತಂಡವೊಂದು ಜಿಲ್ಲೆಯಲ್ಲಿ ಮೊಕ್ಕಾಂ ಹೂಡಿದೆಯೆಂದು ಅವರು ತಿಳಿಸಿದ್ದಾರೆ. ಸ್ಥಳೀಯರು ಈ ಕಾಯಿಲೆಯನ್ನು ‘ಗಲಾ ಘೋಟು’ ಎಂದು ಕರೆಯುತ್ತಿದ್ದಾರೆ.





