ಹಫ್ತಾ ನೀಡದ ವ್ಯಾಪಾರಿಯ ಹತ್ಯೆ: ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆ
ಭಾವನಗರ(ಗುಜರಾತ್), ಸೆ.10: ಹಫ್ತಾ ನೀಡಲು ನಿರಾ ಕರಿಸಿದ್ದಕ್ಕಾಗಿ ಹದಿಹರೆಯದ ಯುವಕರ ಗುಂಪೊಂದು ತರಕಾರಿ ವ್ಯಾಪಾರಿಯೋರ್ವನನ್ನು ದೊಣ್ಣೆ ಮತ್ತು ಕಬ್ಬಿಣದ ಸರಳುಗಳಿಂದ ಥಳಿಸಿ ಕೊಲೆ ಮಾಡಿದ್ದು, ಈ ಬರ್ಬರ ಕೃತ್ಯದ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಗುರುವಾರ ರಾತ್ರಿ ವೇಳೆ ಇಕ್ಕಟ್ಟಾದ ಗಲ್ಲಿಯಲ್ಲಿ ಈ ಕೊಲೆ ನಡೆದಿದ್ದು, ದೃಶ್ಯಗಳು ಸ್ಫುಟವಾಗಿ ಮೂಡಿಬಂದಿವೆ. ಆರೋಪಿಗಳನ್ನು ಗುರುತಿಸಲಾಗಿದ್ದು, ಅವರ ಪತ್ತೆಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತರಕಾರಿ ವ್ಯಾಪಾರಿ ರಫೀಕ್ ಹುಸೈನ್ ಇತ್ತೀಚೆಗೆ ತನ್ನ ಬಡಾವಣೆಯಲ್ಲಿ 25 ಲ.ರೂ.ಗೆ ಮನೆಯೊಂದನ್ನು ಖರೀದಿಸಿದ್ದರು. ಇದನ್ನರಿತ ದುಷ್ಕರ್ಮಿಗಳ ಗುಂಪು ಹಫ್ತಾ ನೀಡುವಂತೆ ಕಳೆದ ಕೆಲವು ದಿನಗಳಿಂದ ಅವರ ಹಿಂದೆ ಬಿದ್ದಿತ್ತು. ತಾನು ಸಾಲ ಮಾಡಿ ಮನೆ ಖರೀದಿಸಿದ್ದೇನೆ ಎಂದು ಅವರಿಗೆ ತಿಳಿಸಿದ್ದ ಹುಸೈನ್, ಹಫ್ತಾ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಇದರಿಂದ ರೊಚ್ಚಿಗೆದ್ದ 17ರಿಂದ 19 ವರ್ಷ ವಯೋಮಾನದ ಎಂಟು ಯುವಕರ ಗುಂಪು ಗುರುವಾರ ರಾತ್ರಿ ಮನೆಗೆ ಮರಳುತ್ತಿದ್ದ ಅವರ ಮೇಲೆ ಮುಗಿಬಿದ್ದಿತ್ತು. ಕೆಳಕ್ಕೆ ಬಿದ್ದಿದ್ದ ಹುಸೈನ್ ಜೀವ ಉಳಿಸಿಕೊಳ್ಳಲು ಅವರೊಂದಿಗೆ ಸೆಣಸಲು ಯತ್ನಿಸಿದ್ದರಾದರೂ ಗುಂಪು ಅವರನ್ನು ಅತ್ಯಂತ ಕ್ರೂರವಾಗಿ ಥಳಿಸಿ ಜೀವವನ್ನೇ ಕಿತ್ತುಕೊಂಡಿದೆ.
ಘಟನೆಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಪೊಲೀಸರು ಕೆಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.





