ಮತ್ತೆ ಮೋದಿಯನ್ನು ಕಾಡಿದ ಬೆಂಗಳೂರಿನ ನಿಗೂಢ ಯುವತಿ!
ದಿಲ್ಲಿ ಅಸೆಂಬ್ಲಿಯಲ್ಲಿ ಸ್ನೂಪ್ ಗೇಟ್ ಆಡಿಯೊ

ಹೊಸದಿಲ್ಲಿ, ಸೆ.10: ಶುಕ್ರವಾರ ದಿಲ್ಲಿ ವಿಧಾನಸಭೆಯಲ್ಲಿ ನಡೆದ ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಬೆಂಗಳೂರಿನ ಯುವತಿಯೊಂದಿಗೆ ನರೇಂದ್ರ ಮೋದಿ ನಿಗೂಢ ಸಂಬಂಧ ಹೊಂದಿದ್ದಾರೆನ್ನಲಾದ ಪ್ರಕರಣ ಚರ್ಚೆಗೆ ಬಂದಿದೆ.
ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಶಾಮೀಲಾಗಿದ್ದಾರೆಂದು ಹೇಳಲಾಗಿರುವ ಕುಖ್ಯಾತ ‘ಸ್ನೂಪ್ ಗೇಟ್’ ಹಗರಣಕ್ಕೆ ಸಂಬಂಧಿಸಿದ ಆಡಿಯೊವನ್ನು ದಿಲ್ಲಿ ಸಚಿವ ಕಪಿಲ್ ಮಿಶ್ರಾ ಸದಸ್ಯರಿಗೆ ಕೇಳಿಸಿದ್ದಾರೆ.
ಈ ಸಂದರ್ಭ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದ ಕಪಿಲ್, ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಗೆ ಬೆಂಗಳೂರು ಯುವತಿ ಜೊತೆ ಸಂಬಂಧವಿತ್ತೆಂದೂ ಈ ಯುವತಿಯ ಮೇಲೆ ನಂತರ ಶಾ ನಿಗಾ ಇಟ್ಟಿದ್ದರೆಂದೂ ಆರೋಪಿಸಿದ್ದಾರೆ.
ಶಾ ಹಾಗೂ ಗುಜರಾತ್ ಪೊಲೀಸ್ ಅಧಿಕಾರಿಯಾಗಿದ್ದ ಸಿಂಘಾಲ್ ನಡುವೆ ಗುಜರಾತಿ ಭಾಷೆಯಲ್ಲಿ ನಡೆದಿದೆಯೆನ್ನಲಾದ ಸಂಭಾಷಣೆಯನ್ನು ಅವರು ಸದನಕ್ಕೆ ತಮ್ಮ ಮೊಬೈಲ್ ಫೋನ್ ಮೂಲಕ ಕೇಳಿಸಿದರು.
ಐಎಎಸ್ ಅಧಿಕಾರಿ ಪ್ರದೀಪ್ ಶರ್ಮ ಅವರು ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಸಿದ್ದ ಅಫಿದಾವಿಟ್ ಓದಿದ ಮಿಶ್ರಾ, ಮುಖ್ಯಮಂತ್ರಿಯಾಗಿದ್ದಾಗ ಮೋದಿ ತನ್ನ ಅಧಿಕೃತ ಸಭೆಗಳಲ್ಲಿ ಭಾಗವಹಿಸುವುದನ್ನು ಬಿಟ್ಟು ಆ ಯುವತಿಯೊಂದಿಗೆ ಫೋನ್‌ನಲ್ಲಿ ಮಾತನಾಡಲು ಹೋಗುತ್ತಿದ್ದರು ಎಂದು ಆರೋಪಿಸಿದ್ದಾರೆ.





