’ಆಮ್’ ಆದ ಲೈಂಗಿಕ ಕಿರುಕುಳ ಆರೋಪ
ಇನ್ನೋರ್ವ ಆಪ್ ಶಾಸಕನ ವಿರುದ್ಧ ದೂರು

ಹೊಸದಿಲ್ಲಿ, ಸೆ.12: ದಿಲ್ಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ ಮತ್ತೊಂದು ಹಗರಣ ಸುತ್ತಿಕೊಂಡಿದೆ. ಪಕ್ಷದ ಶಾಸಕ ಅಮಾನುತುಲ್ಲಾ ಖಾನ್ ವಿರುದ್ಧ ಆತನ ಅತ್ತಿಗೆ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ. ಇದರಿಂದಾಗಿ ಖಾನ್, ದಿಲ್ಲಿಯ ವಕ್ಫ್ ಮಂಡಳಿ ಅಧ್ಯಕ್ಷ ಸ್ಥಾನವನ್ನು ತ್ಯಜಿಸುವುದು ಅನಿವಾರ್ಯವಾಗಿದೆ.
"ಖಾನ್ ತನ್ನ ಜತೆ ದೈಹಿಕ ಸಂಪರ್ಕ ಹೊಂದುವಂತೆ ಒತ್ತಡ ತರುತ್ತಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾರೆ" ಎಂದು ಜಾಮಿಯಾನಗರ ಪೊಲೀಸ್ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಗಂಡ ಕೂಡಾ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದು, ಖಾನ್ ಜೊತೆ ದೈಹಿಕ ಸಂಪರ್ಕ ಹೊಂದುವಂತೆ ಒತ್ತಡ ತರುತ್ತಿದ್ದಾರೆ ಎಂಬುದಾಗಿಯೂ ಮಹಿಳೆ ದೂರು ನೀಡಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 354 ಎ (ಲೈಂಗಿಕ ಕಿರುಕುಳ), 506 (ಅಪರಾಧ ಬೆದರಿಕೆ), 509 (ಮಹಿಳೆಯ ಘನತೆಗೆ ಧಕ್ಕೆ ತರುವ ಪದ ಅಥವಾ ಸಂಜ್ಞೆ ಬಳಕೆ), 120 ಬಿ (ಅಪರಾಧ ಪಿತೂರಿ), 498ಎ (ಮಹಿಳೆಗೆ ಗಂಡ ಅಥವಾ ಗಂಡನ ಮನೆಯವರು ಹಿಂಸೆ ನೀಡುವುದು) ಅನ್ವಯ ಪ್ರಕರಣ ದಾಖಲಿಸಲಾಗಿದೆ.
ವಕ್ಫ್ ಮಂಡಳಿಯ ಹಗರಣಗಳನ್ನು ಬಯಲಿಗೆ ಎಳೆದದ್ದಕ್ಕಾಗಿ ತಮ್ಮನ್ನು ವಿನಾಕಾರಣ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಖಾನ್ ಹೇಳಿಕೊಂಡಿದ್ದಾರೆ.





