150 ದೇಶಗಳಲ್ಲಿ ಸ್ವಾಗತವಿರುವ ನನಗೆ ಸ್ವದೇಶದಲ್ಲಿ ಉಗ್ರ ಪಟ್ಟ ವಿಪರ್ಯಾಸ: ಝಾಕಿರ್ ನಾಯ್ಕ್

ಹೊಸದಿಲ್ಲಿ, ಸೆ.11: "ಇಸ್ಲಾಂನಲ್ಲಿ ಪ್ರಮುಖ ನಾಯಕನಾಗಿ ನಾನು ಬೆಳೆದ ಹಿನ್ನೆಲೆಯಲ್ಲಿ ನನ್ನನ್ನು ಗುರಿಮಾಡುವ ಮಾಡಿರುವುದು, ಇಡೀ ಸಮುದಾಯದ ಮೇಲಿನ ದಾಳಿ ಸಂಚಿನ ಒಂದು ಭಾಗ" ಎಂದು ಇಸ್ಲಾಂ ಧಾರ್ಮಿಕ ವಿದ್ವಾಂಸ ಪ್ರವಚನಕಾರ ಝಾಕಿರ್ ನಾಯ್ಕ್ ದೂರಿದ್ದಾರೆ.
ಭಾರತೀಯರಿಗೆ ಮುಕ್ತ ಪತ್ರ ಬರೆದಿರುವ ಅವರು, "ಯಾವುದೇ ಪುರಾವೆ ಇಲ್ಲದಿದ್ದರೂ ಇಸ್ಲಾಮಿಕ್ ರೀಸರ್ಚ್ ಫೌಂಡೇಷನ್ ಹಾಗೂ ನನ್ನ ಮೇಲೆ ನಿಷೇಧ ವಿಧಿಸಲು ಸಿದ್ಧತೆ ನಡೆದಿದೆ. ಶಾಂತಿ ಹಾಗೂ ಸಾಮರಸ್ಯವನ್ನು ಹದಗೆಡಿಸಲು ಸರಕಾರ ಕೈಹಾಕಿದೆ" ಎಂದು ಆಪಾದಿಸಿದ್ದಾರೆ.
ಐಆರ್‌ಎಫ್‌ನ ವಿದೇಶಿ ದೇಣಿಗೆ ಸ್ವೀಕರಿಸುವ ಲೈಸನ್ಸ್ ನವೀಕರಿಸಿರುವ ಕಾರಣಕ್ಕೆ ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, "ಅಧಿಕಾರಿಗಳು ಸರಕಾರಿ ವಿಧಿ ವಿಧಾನಗಳಿಗೆ ವಿರುದ್ಧವಾಗಿ ಲೈಸನ್ಸ್ ನವೀಕರಿಸಿದ್ದಾರೆಯೇ? ಎಫ್‌ಸಿಆರ್‌ಎ ಅಧಿಕಾರಿಗಳನ್ನು ಏಕೆ ಅಮಾನತು ಮಾಡಿದ್ದಾರೆ? ಅವರು ನಿಯಮಾವಳಿ ಪ್ರಕಾರ ಕ್ರಮ ಕೈಗೊಂಡ ಕಾರಣಕ್ಕಾಗಿಯೇ? ಎಂದು ಪ್ರಶ್ನಿಸಿದ್ದಾರೆ.
ಕಳೆದ 25 ವರ್ಷಗಳಿಂದ ಪ್ರವಚನ ಮಾಡುತ್ತಿದ್ದೇನೆ. ನನ್ನ ವಿರುದ್ಧದ ದಾಳಿ ಸಂಚು ಇಡೀ ಸಮುದಾಯದ ಮೇಲಿನ ದಾಳಿಯ ಅಂಗ ಎಂದು ದೂರಿದ್ದಾರೆ. 150 ದೇಶಗಳಲ್ಲಿ ಸ್ವಾಗತವಿರುವ ನನಗೆ ಸ್ವದೇಶದಲ್ಲಿ ಉಗ್ರ ಪಟ್ಟ ವಿಪರ್ಯಾಸ ಎಂದು ಅವರು ಹೇಳಿದ್ದಾರೆ.







