ಯುಎಸ್ ಓಪನ್: ಜರ್ಮನಿಯ ಕೆರ್ಬರ್‌ಗೆ ಸಿಂಗಲ್ಸ್ ಕಿರೀಟ

ನ್ಯೂಯಾರ್ಕ್, ಸೆ.11: ಝೆಕ್ ಆಟಗಾರ್ತಿ ಕ್ಯಾರೊಲಿನಾ ಪಿಸ್ಕೋವಾರನ್ನು ನೇರ ಸೆಟ್‌ಗಳಿಂದ ಮಣಿಸಿದ ಜರ್ಮನಿಯ ಆಂಜಲಿಕ್ ಕೆರ್ಬರ್ ಯುಎಸ್ ಓಪನ್‌ನಲ್ಲಿ ಮಹಿಳೆಯರ ಸಿಂಗಲ್ಸ್ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಶನಿವಾರ ರಾತ್ರಿ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ದ್ವಿತೀಯ ಶ್ರೇಯಾಂಕಿತೆ ಕೆರ್ಬರ್ 10ನೆ ಶ್ರೇಯಾಂಕಿತೆ ಪಿಸ್ಕೋವಾರನ್ನು 6-3, 4-6, 6-4 ಸೆಟ್‌ಗಳಿಂದ ಮಣಿಸಿ ಪ್ರಶಸ್ತಿ ಎತ್ತಿ ಹಿಡಿದರು. ಮಾತ್ರವಲ್ಲ ವಿಶ್ವದ ನಂ.1 ಪಟ್ಟವನ್ನು ಏರಿದರು.
ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿದ್ದ ಕೆರ್ಬರ್ ಇದೀಗ ಅಮೆರಿಕನ್ ಓಪನ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದ್ದಾರೆ.
‘‘ಒಂದೇ ವರ್ಷದಲ್ಲಿ ಎರಡು ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿರುವುದು ಅದ್ಭುತ ಅನುಭವ. ನನ್ನ ವೃತ್ತಿಜೀವನದಲ್ಲಿ ಇದು ಶ್ರೇಷ್ಠ ವರ್ಷ. ಐದು ವರ್ಷಗಳ ಹಿಂದೆ ನ್ಯೂಯಾರ್ಕ್‌ನಲ್ಲಿ ನಡೆದ ಟೂರ್ನಿಯಲ್ಲಿ ಸೆಮಿ ಫೈನಲ್ ತಲುಪಿದ್ದ ತಾನೀಗ ಪ್ರಶಸ್ತಿಯನ್ನು ಎತ್ತಿ ಹಿಡಿದಿದ್ದೇನೆ. ಇದೊಂದು ಶ್ರೇಷ್ಠ ಸಾಧನೆಯೆಂದು ಭಾವಿಸಿರುವೆ’’ ಎಂದು ಕೆರ್ಬರ್ ನುಡಿದರು.
ಮೆಲ್ಬೋರ್ನ್‌ನಲ್ಲಿ ನಡೆದ ಈ ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್‌ರನ್ನು ಸೋಲಿಸಿ ಪ್ರಶಸ್ತಿ ಎತ್ತಿದ್ದ ಕೆರ್ಬರ್ ವಿಂಬಲ್ಡನ್ ಟೂರ್ನಿಯಲ್ಲೂ ಫೈನಲ್‌ಗೆ ತಲುಪಿದ್ದರು. ಆದರೆ, ಫೈನಲ್‌ನಲ್ಲಿ ಅಮೆರಿಕದ ಆಟಗಾರ್ತಿ ಸೆರೆನಾಗೆ ಸೋತಿದ್ದರು.
ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಆಡಿರುವ ಕಳೆದ 17 ಪಂದ್ಯಗಳಲ್ಲಿ ಮೂರನೆ ಸುತ್ತು ದಾಟಲು ವಿಫಲವಾಗಿದ್ದ ಪ್ಲಿಸ್ಕೋವಾ ಯುಎಸ್ ಓಪನ್‌ನಲ್ಲಿ ಫೈನಲ್‌ಗೆ ತಲುಪಿದ್ದು, ಫೈನಲ್ ಹಾದಿಯಲ್ಲಿ ವೀನಸ್ ವಿಲಿಯಮ್ಸ್‌ರನ್ನು ಸೋಲಿಸಿದ್ದರು. ಒಂದೇ ಟೂರ್ನಿಯಲ್ಲಿ ವಿಲಿಯಮ್ಸ್ ಸಹೋದರಿಯರನ್ನು ಮಣಿಸಿದ ವಿಶ್ವದ ನಾಲ್ಕನೆ ಆಟಗಾರ್ತಿ ಎನಿಸಿಕೊಂಡಿದ್ದರು.







