ಈಗ ಬಿಲ್ ಗೇಟ್ಸ್ ಅಲ್ಲ , ಈ ವ್ಯಕ್ತಿ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ

ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಪುಟ್ಟ ಮಕ್ಕಳಿಗೂ ಉತ್ತರ ಗೊತ್ತಿತ್ತು. ಬಿಲ್ ಗೇಟ್ಸ್! ಆದರೆ, ಇದೀಗ ಆ ಉತ್ತರ ತಪ್ಪು. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಪಟ್ಟ ಇದೀಗ ಅಮನಿಕೊ ಒರ್ಟೆಗಾ ಪಾಲಾಗಿದೆ. ಸ್ಪೇನ್‌ನ ಮಿತವ್ಯಯಿ, ಝರಾ ಜವಳಿ ಉತ್ಪನ್ನ ಸರಣಿಯ ಸಂಸ್ಥಾಪಕ, ಇದೀಗ ಫೋರ್ಬ್ಸ್ ಶತಕೋಟಿಪತಿಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದ್ದಾರೆ.
ಒರ್ಟೆಗಾ ಅವರ ಆಸ್ತಿಯ ನಿವ್ವಳ ಮೌಲ್ಯ 78 ಶತಕೋಟಿ ಡಾಲರ್ ಆಗಿದೆ. ಬಿಲ್ ಗೇಟ್ಸ್ ಅವರ ಆಸ್ತಿಯ ಒಟ್ಟು ಮೌಲ್ಯ 77.4 ಶತಕೋಟಿ ಡಾಲರ್.
ಸ್ವಯಂಪ್ರಯತ್ನದಿಂದ ಕೋಟ್ಯಧಿಪತಿಯಾದ ಒರ್ಟೆಗಾ, ಲಾ ಕೊರುನಾ ಎಂಬಲ್ಲಿನ ರೈಲ್ವೆ ಕಾರ್ಮಿಕನ ಕುಟುಂಬದಲ್ಲಿ ಜನಿಸಿದವರು. 13ನೆ ವಯಸ್ಸಿನಲ್ಲೇ ಶಾಲೆ ಬಿಟ್ಟು ಬಟ್ಟೆ ಅಂಗಡಿ ಉದ್ಯೋಗಕ್ಕೆ ಮೊರೆ ಹೋದವರು. ಮನೆಯಲ್ಲೇ ಮಾಜಿ ಪತ್ನಿ ರೋಸಲಿಯಾ ಮೆರಾ ಸಹಾಯದಿಂದ ಝರಾ ಎಂಬ ಜವಳಿ ಬ್ರಾಂಡ್ ಆರಂಭಿಸಿದ ಒರ್ಟೆಗಾ ಬಳಿಕ ಇಂಡಿಟೆಕ್ಸ್ ಫ್ಯಾಷನ್ ಸಮೂಹವನ್ನು ಸ್ಥಾಪಿಸಿದರು. ಈಗಲೂ ಅದರ ಅಧ್ಯಕ್ಷರಾಗಿದ್ದಾರೆ.
ಬಿಲಿಯನ್ ಡಾಲರ್ ಅಧಿಪತಿಯಾದರೂ ಸರಳ ಜೀವನ ಶೈಲಿಗೆ ಹೆಸರಾದ ಇವರು ಇಂದಿಗೂ ಉದ್ಯೋಗಿಗಳ ಜತೆ ಕ್ಯಾಂಟೀನ್‌ನಲ್ಲಿ ಊಟ ಮಾಡುತ್ತಾರೆ. ಹಲವು ವರ್ಷಗಳ ಹಿಂದೆ ಕಾಫಿ ಹೀರುತ್ತಿದ್ದ ಕೆಫೆಯಲ್ಲೇ ಕಾಫಿ ಸೇವಿಸುತ್ತಾರೆ ಹಾಗೂ ಹಿಂದೆ ಬಳಸುತ್ತಿದ್ದ ಬ್ರಾಂಡ್‌ನ ಅಂಗಿ- ಪ್ಯಾಂಟನ್ನೇ ಧರಿಸುತ್ತಾರೆ. ತಮ್ಮ ಖಾಸಗಿ ಜೀವನವನ್ನು ಕಾಪಾಡಿಕೊಂಡು ಬಂದಿರುವ ಒರ್ಟೆಗಾ, ಪತ್ರಿಕಾ ಸಂದರ್ಶನ ನೀಡುವುದು ತೀರಾ ಅಪರೂಪ.







