ಹೊಸ ಇನಿಂಗ್ಸ್ ಆರಂಭಿಸಿದ ಕ್ರಿಕೆಟಿಗ ಪ್ರವೀಣ್ ಕುಮಾರ್

ಲಕ್ನೋ, ಸೆ.11: ಉತ್ತರಪ್ರದೇಶದ ಅಸೆಂಬ್ಲಿ ಚುನಾವಣೆಗೆ ಮುಂಚಿತವಾಗಿ ಕ್ರಿಕೆಟಿಗ ಪ್ರವೀಣ್ ಕುಮಾರ್ ರವಿವಾರ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ.
‘‘ನಾನು ಮುಖ್ಯಮಂತ್ರಿಯನ್ನು ಭೇಟಿಯಾಗಿರುವೆ. ಎಸ್ಪಿ ಪಕ್ಷವನ್ನು ಸೇರಲು ನಿರ್ಧರಿಸಿವೆ. ಪಕ್ಷಕ್ಕೆ ಎಷ್ಟು ಸಾಧ್ಯವೋ, ಅಷ್ಟು ಕೊಡುವೆ ನೀಡುವೆ’’ ಎಂದು ಮುಖ್ಯಮಂತ್ರಿಯನ್ನು ಭೇಟಿಯಾದ ಬಳಿಕ ಸುದ್ದಿಗಾರರಿಗೆ ಕುಮಾರ್ ತಿಳಿಸಿದ್ದಾರೆ.
ನೀವು ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಮಾರ್,‘‘ ನಾನು ಈ ಕ್ಷೇತ್ರದಲ್ಲಿ(ರಾಜಕೀಯ) ತುಂಬಾ ಕಿರಿಯ. ರಾಜಕಿಯವನ್ನು ಕಲಿಯಲು ಯತ್ನಿಸುವೆ’’ ಎಂದರು.
ಮುಖ್ಯಮಂತ್ರಿ ಅಖಿಲೇಶ್ ಯಾದವ್‌ರನ್ನು ಕೊಂಡಾಡಿದ ಪ್ರವೀಣ್ ಕುಮಾರ್, ‘‘ಅವರು ಕ್ರೀಡಾಪಟುಗಳಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಲಕ್ನೋ ಹಾಗು ಸೈಫೈನಲ್ಲಿ ದೊಡ್ಡ ಕ್ರೀಡಾಂಗಣಗಳು ನಿರ್ಮಾಣವಾಗುತ್ತಿವೆ. ರಾಜ್ಯದ ಸರ್ವಾಂಗೀಣ ಪ್ರಗತಿಗಾಗಿ ಮುಖ್ಯಮಂತ್ರಿಗಳು ತುಂಬಾ ಶ್ರಮಿಸಿದ್ದಾರೆ’’ಎಂದರು.
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಉತ್ತರ ಪ್ರದೇಶ ತಂಡವನ್ನು ಪ್ರತಿನಿಧಿಸುತ್ತಿರುವ ಮೀರತ್ ಮೂಲದ ಪ್ರವೀಣ್ ಕುಮಾರ್ ಭಾರತೀಯ ಕ್ರಿಕೆಟ್ ತಂಡದಲ್ಲಿ ಆರು ಟೆಸ್ಟ್ ಹಾಗೂ 68 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಕ್ರಮವಾಗಿ 27 ಹಾಗೂ 77 ವಿಕೆಟ್‌ಗಳನ್ನು ಕಬಳಿಸಿದ್ದಾರೆ.







