ಟ್ರೆಂಡಿಂಗ್ ಹಾಡು ಕಾಲಾ ಚಷ್ಮಾಗೂ ಈ ಪೊಲೀಸ್ ಪೇದೆಗೂ ಇದೆ ವಿಶೇಷ ನಂಟು

ಮೂಲತಃ 90ರ ದಶಕದ ‘ಕಾಲಾ ಚಷ್ಮಾ’ಹಾಡು ಇತ್ತೀಚೆಗೆ ಜನಪ್ರಿಯವಾಗಿದೆ. ಈ ಹಾಡನ್ನು ಮತ್ತೆ ಜನಪ್ರಿಯಗೊಳಿಸಿದ್ದು ‘ಬಾರ್ ಬಾರ್ ದೇಖೋ’ ಸಿನೆಮಾ. ಈ ಕಾಲಾ ಚಷ್ಮಾ ಬಗ್ಗೆ ನೀವು ಕೇಳಿರಬಹುದು. ಆದರೆ ಅಮ್ರಿಕ್ ಸಿಂಗ್ ಶೇರಾ ಬಗ್ಗೆ ಕೇಳಿದ್ದೀರಾ? ಆತ ಪಂಜಾಬಿ ಪೊಲೀಸ್ ಪಡೆಯಲ್ಲಿ ಕಪುರ್ತಲಾದ ಹೆಡ್ ಕಾನ್‌ಸ್ಟೇಬಲ್. ಈ ಹಾಡನ್ನು ಬರೆದವರೇ ಅಮ್ರಿಕ್.
43 ವಯಸ್ಸಿನ ಶೇರಾ ಅವರು ಜಲಂಧರ್ ಬಳಿಯ ತಲ್ವಂಡಿ ಚೌದ್ರಿಯನ್ ಗ್ರಾಮದ ನಿವಾಸಿ. 1990ರಲ್ಲಿ ತಾನು ಬರೆದ ಹಾಡು ಬಾಲಿವುಡ್ ಸಿನೆಮಾದಲ್ಲಿ ಬಂದಿರುವುದು ಅವರಿಗೆ ಬಹಳ ಖುಷಿಯಾಗಿದೆ. “ಎರಡು ತಿಂಗಳ ಹಿಂದೆ ನನ್ನ ಸ್ನೇಹಿತರೊಬ್ಬರು ಕರೆ ಮಾಡಿ’ ಕಾಲಾ ಚಷ್ಮಾ’ ಹಾಡನ್ನು ಟಿವಿಯಲ್ಲಿ ಪ್ರಸಾರ ಮಾಡಿರುವ ಸುದ್ದಿ ನೀಡಿದ್ದರು. ನನ್ನ ಖುಷಿಯನ್ನು ವರ್ಣಿಸಲೇ ಆಗದು. ಸಂತೋಷವೂ ಆಗಿತ್ತು, ಆಘಾತವೂ ಆಗಿತ್ತು” ಎನ್ನುತ್ತಾರೆ ಶೇರಾ. ಜಲಂದರ್ ಮೂಲದ ಏಂಜಲ್ ರೆಕಾರ್ಡ್ ಕಂಪನಿ ನಾಲ್ಕು ತಿಂಗಳ ಹಿಂದೆ ಶೇರಾಗೆ ಕರೆ ಮಾಡಿ “ಮುಂಬೈ ಮೂಲದ ಕಂಪನಿಗೆ ಉದ್ಘಾಟನೆಗೆ ಹಾಡಲು ಹಾಡುಗಳು ಬೇಕಿವೆ” ಎಂದು ಹೇಳಿ ಒಪ್ಪಂದಕ್ಕೆ ಸಹಿ ಹಾಕಿಕೊಂಡಿತ್ತು. ರೂ.11,000 ಪಡೆದು ಶೇರಾ ಒಪ್ಪಂದ ಮಾಡಿಕೊಂಡಿದ್ದರು. ಸಿಮೆಂಟ್ ಕಂಪನಿಯ ಹೆಸರೂ ನನಗೆ ಗೊತ್ತಿಲ್ಲ. ಈ ಹಾಡು ಸಿನೆಮಾದಲ್ಲಿ ಬರಲಿದೆ ಎಂದು ಯಾರೂ ನನಗೆ ಹೇಳಿಲ್ಲ ಎನ್ನುತ್ತಾರೆ ಶೇರಾ. ಆದರೆ ಅವರಿಗೇನೂ ಬೇಸರವಿಲ್ಲ. ಯಾರ ಬಗ್ಗೆಯೂ ಅವರಲ್ಲಿ ಸಿಟ್ಟಿಲ್ಲ. ಸಂಗೀತ ಬಿಡುಗಡೆ ಅಥವಾ ಸಿನೆಮಾ ಬಿಡುಗಡೆಗೆ ಮುಂಬೈನಿಂದ ನನ್ನನ್ನು ಯಾರೂ ಕರೆಯಲಿಲ್ಲ. ಅಲ್ಲಿಗೆ ಹೋಗಿ ಸಣ್ಣ ಗ್ರಾಮದ ವ್ಯಕ್ತಿ ಈ ಹಾಡನ್ನು ಬರೆದಿದ್ದಾರೆ ಎಂದು ಹೇಳಬೇಕು ಎಂದಷ್ಟೇ ಬಯಸಿದ್ದೆ” ಎನ್ನುತ್ತಾರೆ.
ಶೇರಾ 9ನೇ ತರಗತಿಯಲ್ಲಿದ್ದಾಗ 15ನೇ ವಯಸ್ಸಿನಲ್ಲಿ ಈ ಹಾಡು ಬರೆದಿದ್ದರು. ಈ ಹಾಡು ಬಿಡುಗಡೆಗೆ ಆ ಕಾಲದಲ್ಲಿ ಹಲವು ಸಂಗೀತಗಾರರು ಬಂದಿದ್ದರು. ಅಮರ್ ಅರ್ಷಿ ಈ ‘ಕಾಲಾ ಚಷ್ಮಾ’ ಹಾಡನ್ನು ಪಡೆದು ಇಂಗ್ಲೆಂಡಿನ ಕಾರ್ಯಕ್ರಮದಲ್ಲಿ ಹಾಡಿದ್ದರು. ಇಂಗ್ಲೆಂಡಿನಲ್ಲಿ ಈ ಹಾಡನ್ನು ಬಿಡುಗಡೆಗೊಳಿಸಿ ಕಂಪನಿ ಜನಪ್ರಿಯತೆ ಪಡೆದಿತ್ತು. ನಂತರ ಚಂಡೀಗಢದ ಕಂಪನಿಯೊಂದು ಈ ಹಾಡನ್ನು ಪಂಜಾಬಿನಲ್ಲಿ ಬಿಡುಗಡೆ ಮಾಡಿ ಇಲ್ಲೂ ಜನಪ್ರಿಯವಾಯಿತು. ಅವರ ಇತರ ಹಾಡುಗಳನ್ನೂ ನಂತರ ಜನಪ್ರಿಯ ಗಾಯಕರಾದ ಪೂಜಾ, ರೋಶನ್ ಪ್ರಿನ್ಸ್ ಮೊದಲಾದವರು ಹಾಡಿದ್ದಾರೆ. “ಹಾಡು ಬಾಲಿವುಡ್ ಪ್ರವೇಶಿಸಿದಾಗ ನಿಜವಾದ ಪ್ರಸಿದ್ಧಿ ಬಂದ ಜನರು ಹುಚ್ಚು ಹಿಡಿಸಿಕೊಂಡರು. ಪಂಜಾಬಿ ಕವಿತೆ ಬರೆಯುವವರಿಗೆ ಸೂಕ್ತ ಸಂಭಾವನೆ ಸಿಗುವುದಿಲ್ಲ. ಇಲ್ಲಿ ಸಾಹಿತಿಗಳಾಗುವುದು ಸುಲಭವಲ್ಲ” ಎನ್ನುತ್ತಾರೆ ಶೇರಾ. “ಗ್ರಾಮದಲ್ಲಿ ಜನಪ್ರಿಯನಾಗಬೇಕು ಎಂದು ಕವಿತೆ ಬರೆಯಲು ಆರಂಭಿಸಿದ್ದೆ. ಆ ಕನಸು ನಿಜವಾಗಿದೆ. ಆದರೆ ನನ್ನ ಗ್ರಾಮವೂ ಪ್ರಸಿದ್ಧವಾಗಬೇಕು ಎಂದುಕೊಂಡಿದ್ದೆ. ಸಿನೆಮಾ ತಯಾರಕರು ನನ್ನನ್ನು ಕರೆದಿದ್ದರೆ ಅದು ಸಾಧ್ಯವಾಗುತ್ತಿತ್ತು. ಪಂಜಾಬಿನಲ್ಲೇ ಆ ಹಾಡು ನನ್ನದೆಂದು ಕೆಲವರಿಗಷ್ಟೇ ಗೊತ್ತಿದೆ” ಎನ್ನುತ್ತಾರೆ.
‘ಕಾಲಾ ಚಷ್ಮಾ’ ಹಾಡನ್ನು ಬಹಳ ಸೂಕ್ಷ್ಮವಾಗಿ ಕೇಳಿದರೆ ಕೊನೆಯಲ್ಲಿ ಅವರ ಊರು ತಲ್ವಂಡಿ ಚೌದ್ರಿಯನ್ ಹೆಸರು ಬರುತ್ತದೆ. ಆ ಮೂಲಕ ಅವರು ತಮ್ಮ ಗ್ರಾಮಕ್ಕೆ ವಂದನೆ ಸಲ್ಲಿಸಿದ್ದಾರೆ.
ಕೃಪೆ: www.hindustantimes.com





