ಸಂಜಯ್ ದತ್ತ್ ಬಯೋಪಿಕ್‌ನಲ್ಲಿ ರಣಬೀರ್-ಅನುಷ್ಕಾ ಜೋಡಿ

ರಣಬೀರ್ ಕಪೂರ್ ಹಾಗೂ ಅನುಷ್ಕಾ ಶರ್ಮಾ ಅಭಿನಯದ ಬಾಲಿವುಡ್ ಚಿತ್ರ ‘ಬಾಂಬೆ ವೆಲ್ವೆಟ್’ ಬಾಕ್ಸ್ ಆಫೀಸ್‌ನಲ್ಲಿ ಮುಗ್ಗರಿಸಿತ್ತು. ಆದಾಗ್ಯೂ ಚಿತ್ರದಲ್ಲಿ ಈ ತಾರಾಜೋಡಿಯ ಅಭಿನಯ ಕೆಮಿಸ್ಟ್ರಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಇದೀಗ ಕರಣ್ ಜೋಹರ್ ನಿರ್ಮಾಣದ ‘ಯೆ ದಿಲ್ ಹೈ ಮುಷ್ಕಿಲ್’ ಈ ತಾರಾ ಜೋಡಿ ಮತ್ತೊಮ್ಮೆ ಒಂದಾಗಿದೆ. ಮುಂದಿನ ತಿಂಗಳು ತೆರೆಕಾಣಲಿರುವ ಈ ಚಿತ್ರವು ಈಗಾಗಲೇ ಬಾಲಿವುಡ್‌ನಲ್ಲಿ ಭಾರೀ ಕುತೂಹಲವನ್ನು ಕೆರಳಿಸಿದೆ. ಈ ಮಧ್ಯೆ ರಣಬೀರ್-ಅನುಷ್ಕಾ ಜೋಡಿ ಮೂರನೆ ಬಾರಿ ಜೊತೆಯಾಗಿ ನಟಿಸಲಿದ್ದಾರೆಂಬ ಸುದ್ದಿಯೂ ಕೇಳಿಬರುತ್ತಿದೆ. ಹೌದು. ನಟ ಸಂಜಯ್ ದತ್ ಜೀವನಕಥೆಯನ್ನು ಆಧರಿಸಿದ ಚಿತ್ರವೊಂದರಲ್ಲಿ ರಣಬೀರ್-ಅನುಷ್ಕಾ ಮುಖ್ಯ ಪಾತ್ರಗಳಲ್ಲಿ ನಟಿಸಲಿದ್ದಾರೆಂಬ ವದಂತಿಗಳು ಬಾಲಿವುಡ್‌ನಲ್ಲಿ ಹರಿದಾಡುತ್ತಿವೆ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಈ ಚಿತ್ರದಲ್ಲಿ ಅನುಷ್ಕಾ ಶರ್ಮಾ, ಸಂಜಯ್ ದತ್ ಪತ್ನಿ ಮಾನ್ಯತಾರ ಪಾತ್ರವನ್ನು ನಿರ್ವಹಿಸಲಿದ್ದಾರಂತೆ. ಆದರೆ ಸಂಜಯ್‌ದತ್ ಅವರ ಮೊದಲ ಪತ್ನಿಯ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಸಂಜಯ್‌ದತ್‌ನ ವರ್ಣರಂಜಿತ ಹಾಗೂ ವಿವಾದಾತ್ಮಕ ಬದುಕಿನ ಬಗ್ಗೆ ಬೆಳಕು ಚೆಲ್ಲುವ ಈ ಬಯೋಪಿಕ್‌ನಲ್ಲಿ , ಆಮೀರ್‌ಖಾನ್ ಅವರು ಸಂಜಯ್‌ದತ್ ತಂದೆ ಸುನೀಲ್‌ದತ್ ಪಾತ್ರದಲ್ಲಿ ನಟಿಸಲಿದ್ದಾರೆಂಬ ವದಂತಿಗಳಿದ್ದವು. ಆದರೆ ಆಮಿರ್ ಆರಂಭದಲ್ಲಿ ಈ ಪಾತ್ರದ ಬಗ್ಗೆ ಆಸಕ್ತಿ ತೋರಿಸಿದ್ದರೂ,ಆನಂತರ ಮನಸ್ಸು ಬದಲಾಯಿಸಿ ಚಿತ್ರದಿಂದ ಹಿಂದೆ ಸರಿದಿದ್ದಾರೆ. ಈಗ ನಿರ್ದೇಶಕರು ಈ ಪಾತ್ರಕ್ಕಾಗಿ ಇನ್ನೋರ್ವ ನಟನ ತಲಾಷ್‌ನಲ್ಲಿದ್ದಾರೆ.





