ಮತ್ತೆ ದಿಲೀಪ್ ಚಿತ್ರದಲ್ಲಿ ಕಾವ್ಯಾ ಮಾಧವನ್

ಇತ್ತೀಚೆಗೆ ತೆರೆಕಂಡ ಅಡೂರ್ ಗೋಪಾಲಕೃಷ್ಣನ್ ನಿರ್ದೇಶನದ ‘ಪಿನ್ನೆಯುಂ ’ಚಿತ್ರದ ಬಳಿಕ ದಿಲೀಪ್ ಹಾಗೂ ಕಾವ್ಯಾ ಮಾಧವನ್ ಇನ್ನೊಂದು ಚಿತ್ರದಲ್ಲಿ ಜೊತೆಯಾಗಿ ನಟಿಸಲಿದ್ದಾರೆ. ‘ದೃಶ್ಯಂ’ ಖ್ಯಾತಿಯ ಜಿತುಜೋಸೆಫ್ ನಿರ್ದೇಶಿಸಲಿರುವ ಚಿತ್ರದಲ್ಲಿ ಇವರು ಮತ್ತೆ ಒಂದಾಗಲಿದ್ದಾರೆ. ‘ಲೈಫ್ ಆಫ್ ಜೋಸು ಕುಟ್ಟಿ’ ಬಳಿಕ ದಿಲೀಪ್, ಜಿತು ಜೋಸೆಫ್ ಚಿತ್ರದಲ್ಲಿ ನಟಿಸುತ್ತಿರುವುದು ಇದು ಎರಡನೆ ಸಲವಾಗಿದೆ. ಆದರೆ ಕಾವ್ಯಾಮಾಧವನ್ ಇದೇ ಮೊದಲ ಬಾರಿ ಜಿತು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದ ಉಳಿದ ವಿವರಗಳು ಇನ್ನೂ ಹೊರಬಿದ್ದಿಲ್ಲ. ಆದಾಗ್ಯೂ ಇದೊಂದು ನಾಯಕಿ ಪ್ರಧಾನ ಕಥಾವಸ್ತುವನ್ನು ಹೊಂದಿರುವ ಸಿನೆಮಾವೆಂದು ಹೇಳಲಾಗುತ್ತಿದೆ.
‘ದೃಶ್ಯಂ’ ಬಳಿಕ ಮಲಯಾಳಂನ ಸ್ಟಾರ್ ನಿರ್ದೇಶಕನೆನಿಸಿರುವ ಜಿತು, ಈ ಚಿತ್ರದೊಂದಿಗೆ ಮೆಗಾಸ್ಟಾರ್ ಮಮ್ಮುಟ್ಟಿ ಅಭಿನಯದ ಚಿತ್ರಕ್ಕೂ ಆ್ಯಕ್ಷನ್‌ಕಟ್ ಹೇಳಲಿದ್ದಾರೆ. ಈ ಬಗ್ಗೆ ಅವರು ಮಮ್ಮುಟ್ಟಿ ಜೊತೆ ಈಗಾಗಲೇ ಒಂದು ಹಂತದ ಮಾತುಕತೆಯನ್ನು ಮುಗಿಸಿದ್ದಾರೆ. ಎಲ್ಲವೂ ಸರಿಹೋದಲ್ಲಿ ಈ ಚಿತ್ರದ ಶೂಟಿಂಗ್ ಮುಂದಿನ ಎರಡು ತಿಂಗಳೊಳಗೆ ಆರಂಭಗೊಳ್ಳಲಿದೆಯೆಂದು ಚಿತ್ರತಂಡ ಹೇಳಿಕೊಂಡಿದೆ.





