ಇದನ್ನು ಓದದೇ ಮಿಸ್ ಮಾಡಿಕೊಳ್ಳಬೇಡಿ : ರಿಯೋ ಪ್ಯಾರಾಲಿಂಪಿಕ್ಸ್ ನಲ್ಲೊಬ್ಬ ವಿಭಿನ್ನ ಚಾಂಪಿಯನ್ !
" ನನ್ನ ಕಣ್ಣುಗಳು ನನ್ನ ಹೃದಯದಲ್ಲಿವೆ "

ರಿಯೋ ಡಿಜನೈರೊ, ಸೆ.11: ಈಗ ನಡೆಯುತ್ತಿರುವ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ದೃಶ್ಯಗಳನ್ನು ಸೆರೆ ಹಿಡಿಯಲು ಬಂದ ಪ್ರತಿಭಾವಂತ ಫೋಟೊಗ್ರಾಫರ್‌ಗಳ ಪೈಕಿ ಜಾವೊ ಮೈಯಾ ಕೂಡ ಒಬ್ಬರು. ವಿಚಿತ್ರವೆಂದರೆ, ಅವರು ಸೆರೆಹಿಡಿದ ಅದ್ಭುತ ದೃಶ್ಯಗಳು ಅವರಿಗೇ ಕಾಣುವುದಿಲ್ಲ. ಅವರು ಅಂಧ ಫೋಟೊಗ್ರಾಫರ್.
‘‘ನನಗೆ ಫೋಟೊ ಸೆರೆ ಹಿಡಿಯಲು ದೃಷ್ಟಿಯ ಅಗತ್ಯವಿಲ್ಲ. ನನ್ನ ಕಣ್ಣುಗಳು ನನ್ನ ಹೃದಯದಲ್ಲಿದೆ’’ ಎಂದು ಮೈಯಾ ಮಾರ್ಮಿಕವಾಗಿ ಹೇಳುತ್ತಾರೆ.
ಹಲವು ಬಾರಿ ಅಂಧ ಫೋಟೊಗ್ರಾಫರ್ ಕಠಿಣ ಸವಾಲನ್ನು ಎದುರಿಸಬೇಕಾಗುತ್ತದೆ. ಆದರೆ, ಮೈಯಾ ಸೆರೆ ಹಿಡಿದಿರುವ ಫೋಟೊಗಳು ಮ್ಯಾಗಝಿನ್ ಕ್ವಾಲಿಟಿ ಹೊಂದಿವೆ. ವೃತ್ತಿಪರ ಫೋಟೊಗ್ರಾಫರ್ ಸೆರೆ ಹಿಡಿದ ಚಿತ್ರಗಳಷ್ಟೇ ಗುಣಮಟ್ಟದಿಂದ ಕೂಡಿವೆ. ಇದಕ್ಕೆ ಫ್ರೆಂಚ್‌ನ ವಿಶ್ವ ದಾಖಲೆ ಲಾಂಗ್‌ಜಂಪ್ ತಾರೆ ಮೇರಿ-ಅಮೇಲಿ ಲೆ ಫ್ಯೂರ್ ಅವರ ಫೋಟೋವೇ ಸಾಕ್ಷಿ. ಲಾಂಗ್‌ಜಂಪ್ ವೇಳೆ ಮರಳಿನ ಮೇಲೆ ಬಿದ್ದಂತಹ ಮೇರಿ ಅಮೇಲಿ ಅವರ ಮುಖಭಾವವನ್ನು ಜಾವೊ ತನ್ನ ಕ್ಯಾಮರಾದಲ್ಲಿ ಚೆನ್ನಾಗಿ ಸೆರೆ ಹಿಡಿದಿದ್ದರು.
41ರ ಹರೆಯದ ಮೈಯಾ ಹುಟ್ಟು ಕುರುಡರಲ್ಲ. ಅವರಿಗೆ 28ವರ್ಷ ಪ್ರಾಯವಾಗಿದ್ದಾಗ ಕಣ್ಣಿಗೆ ಸಂಬಂಧಿಸಿ ಕಾಯಿಲೆಗೆ ತುತ್ತಾಗಿದ್ದರು. ಒಂದು ವರ್ಷಗಳ ಕಾಲ ಚಿಕಿತ್ಸೆ ಪಡೆದರೂ ಅವರ ದೃಷ್ಟಿ ಸರಿಯಾಗಲಿಲ್ಲ. ಅವರಿಗೆ ತುಂಬಾ ಹತ್ತಿರದಿಂದ ನೋಡಿದರೆ ಆಕಾರ ಹಾಗೂ ಸ್ವಲ್ಪ ಬಣ್ಣ ಮಾತ್ರ ಗೊತ್ತಾಗುತ್ತದೆ.
ಬ್ರೆಝಿಲ್‌ನ ಸಾವೊಪೌಲೊದಲ್ಲಿ ಪೋಸ್ಟ್‌ಮ್ಯಾನ್ ಕೆಲಸ ಮಾಡುತ್ತಿರುವ ಮೈಯಾ ಫೋಟೊಗ್ರಾಫಿಯಲ್ಲೂ ಆಸಕ್ತಿ ಬೆಳೆಸಿಕೊಂಡರು.
‘‘ಫೋಟೊಗ್ರಾಫಿ ತುಂಬಾ ಸೂಕ್ಷ್ಮವಾದ ವಿಷಯ. ನಾನು ಗ್ರಹಿಕೆ, ನನ್ನ ಹೃದಯದಲ್ಲಿ ನೋಡಿದ್ದನ್ನು ವಿಶ್ವಕ್ಕೆ ತೋರ್ಪಡಿಸಲು ಸಾಧ್ಯವಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ’’ ಎಂದು ಮೈಯಾ ಹೇಳುತ್ತಾರೆ.
ಜೊವೊ ಮೈಯಾ ಈ ವಾರ ಪ್ಯಾರಾಲಿಂಪಿಕ್ ಸ್ಟೇಡಿಯಂನಲ್ಲಿ ನಡೆದ ಕ್ರೀಡಾ ಫೊಟೋಗ್ರಾಫರ್‌ಗಳ ತರಬೇತಿ ಶಿಬಿರದಲ್ಲೂ ಭಾಗವಹಿಸಿದ್ದರು. ಕಳೆದ ವರ್ಷ ರಿಯೋ ಒಲಿಂಪಿಕ್ಸ್‌ಗಾಗಿ ನಡೆದ ಕ್ರೀಡಾ ಫೋಟೊಗ್ರಾಫರ್‌ಗಳ ಪೂರ್ವ ತಯಾರಿ ಶಿಬಿರದಲ್ಲೂ ಭಾಗವಹಿಸಿದ್ದರು. ಮೈಯಾ ಮೊದಲಿಗೆ ಟ್ರಾಕ್ ರೇಸ್‌ನ್ನು ಸೆರೆಹಿಡಿಯಲು ಬಯಸಿದ್ದರು. ಆದರೆ, ಅವರಿಗೆ ಅಳತೆ ಹಾಗೂ ಅಂತರವನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ.
2008ರಲ್ಲಿ ಮೈಯಾ ಸಾಂಪ್ರದಾಯಿಕ ಕ್ಯಾಮರಾಗಳಲ್ಲಿ ಚಿತ್ರವನ್ನು ಸೆರೆ ಹಿಡಿಯಲು ಆರಂಭಿಸಿದರು. ಇದೀಗ ಅವರು ಸ್ಮಾರ್ಟ್‌ಫೋನ್‌ನ್ನು ಬಳಸುತ್ತಾರೆ. ಮೈಯಾಗೆ ಇಬ್ಬರು ಸ್ನೇಹಿತರು ಫೋಟೊಗ್ರಾಫಿ ಕಲೆ ಹಾಗೂ ಸೆಲ್ ಫೋನ್‌ಗಳನ್ನು ಬಳಸುವುದು ಹೇಗೆಂಬುದನ್ನು ಕಲಿಸಿಕೊಟ್ಟಿದ್ದಾರೆ. ಇಬ್ಬರು ಸ್ನೇಹಿತರು ನನ್ನ ಎರಡು ಕಣ್ಣು ಇದ್ದಂತೆ ಎಂದು ಮೈಯಾ ಹೇಳುತ್ತಾರೆ.
ಆ ಇಬ್ಬರು ಸ್ನೇಹಿತರು ಇಲ್ಲದಿದ್ದರೆ ನನಗೆ ಇಷ್ಟೇಲ್ಲಾ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅವರು ನನಗೆ ಎಡಿಟಿಂಗ್ ಮಾಡಲು ಸಹಕರಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ನಾನು ಸೆರೆ ಹಿಡಿದ ಫೋಟೊಗಳನ್ನು ಅವರು ಹಾಕುತ್ತಾರೆ ಎಂದು ಮೈಯಾ ಹೇಳುತ್ತಾರೆ.
ಮೈಯಾ ಪ್ಯಾರಾಲಿಂಪಿಕ್ಸ್ ಸ್ಪೋರ್ಟ್ಸ್‌ನಲ್ಲಿ ತೊಡಗಿಸಿಕೊಳ್ಳಲು ಯತ್ನಿಸಿದ್ದರು. ಆದರೆ, ಅಥ್ಲೀಟ್ ಆಗಬೇಕಾದರೆ ತುಂಬಾ ಕಷ್ಟವಿದೆ ಎಂದು ಹಿಂದೆ ಸರಿದಿದ್ದರು. ‘‘ಕ್ರೀಡೆಯೇ ನನಗೆ ಸರ್ವಸ್ವ. ನನ್ನ ಕ್ಯಾಮರಾದ ಮೂಲಕ ಕ್ರೀಡೆಯನ್ನು ಹಿಂಬಾಸುತ್ತಿರುವೆ. 2020ರಲ್ಲಿ ಟೋಕಿಯೊದಲ್ಲಿ ನಡೆಯಲಿರುವ ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ತೆರಳಿ ಫೋಟೊಗಳನ್ನು ಸೆರೆ ಹಿಡಿಯುವುದು ನನ್ನ ಕನಸಾಗಿದೆ’’ ಎಂದು ಮೈಯಾ ಹೇಳುತ್ತಾರೆ.







