‘ಗುಜರಾತಿನ ದುರ್ವಾಸನೆ ’ಸವಿಯಲು ಅಮಿತಾಭ್, ಮೋದಿಗೆ ದಲಿತರ ಆಹ್ವಾನ

ಅಹ್ಮದಾಬಾದ್,ಸೆ.11: ಉನಾ ಘಟನೆಯನ್ನು ವಿರೋಧಿಸಿ ಪ್ರತಿಭಟನೆಯಲ್ಲಿ ತೊಡಗಿರುವ ದಲಿತರು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ಪ್ರಚಾರ ರಾಯಭಾರಿಯಾಗಿರುವ ಪ್ರವಾಸೋದ್ಯಮ ಇಲಾಖೆಯ ‘ಖುಷಬೂ ಗುಜರಾತ್ ಕಿ(ಗುಜರಾತಿನ ಪರಿಮಳ)’ಉಪಕ್ರಮಕ್ಕೆ ಪ್ರತಿಯಾಗಿ ‘ಬದ್‌ಬೂ ಗುಜರಾತ್ ಕಿ(ಗುಜರಾತಿನ ದುರ್ವಾಸನೆ) ’ ಹೆಸರಿನಲ್ಲಿ ಪೋಸ್ಟ್‌ಕಾರ್ಡ್ ಅಭಿಯಾನವನ್ನು ಆರಂಭಿಸಲು ನಿರ್ಧರಿಸಿದ್ದಾರೆ.
ಉನಾ ದಲಿತ ಅತ್ಯಾಚಾರ ಲಡತ್ ಸಮಿತಿಯು ಮಂಗಳವಾರ ಅಹ್ಮದಾಬಾದ್ ಸಮೀಪದ ಕಲೋಲ್‌ನಿಂದ ಈ ಅಭಿಯಾನವನ್ನು ಆರಂಭಿಸಲಿದೆ. ಈ ಅಭಿಯಾನದಡಿ ಅಮಿತಾಭ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯಕ್ಕೆ ಆಹ್ವಾನಿಸಿ ‘ಬದ್‌ಬೂ ಗುಜರಾತ್ ಕಿ’ಎಂಬ ಪ್ರಚಾರ ವಾಕ್ಯ ಹೊಂದಿರುವ ಸಾವಿರಾರು ಪೋಸ್ಟ್‌ಕಾರ್ಡ್‌ಗಳನ್ನು ಅವರ ವಿಳಾಸಗಳಿಗೆ ರವಾನಿಸಲಾಗುವುದು.
ಉನಾ ದೌರ್ಜನ್ಯದ ವಿರುದ್ಧ ಹೋರಾಟದ ಪಣ ತೊಟ್ಟಿರುವ ದಲಿತರು ವಿಲೇವಾರಿ ಮಾಡದೆ ಬಿಟ್ಟಿರುವ ಗೋವುಗಳ ಕಳೇಬರಗಳು ಹಾಗೆಯೇ ಬಿದ್ದುಕೊಂಡಿದ್ದು, ಗುಜರಾತಿಗೆ ಭೇಟಿ ನೀಡಿ ಅವುಗಳ ದುರ್ವಾಸನೆಯನ್ನು ಅನುಭವಿಸುವಂತೆ ಆಹ್ವಾನಗಳನ್ನು ಈ ಪೋಸ್ಟ್‌ಕಾರ್ಡ್‌ಗಳು ಹೊತ್ತೊಯ್ಯಲಿವೆ ಎಂದು ಸಮಿತಿಯ ಸಂಚಾಲಕ ಜಿಗ್ನೇಶ್ ಮೇವಾನಿ ಅವರು ರವಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಮೋದಿಯವರ ಅಜೆಂಡಾದ ಪ್ರಚಾರಕ್ಕಾಗಿ ಬಚ್ಚನ್ ಅವರು ಗುಜರಾತಿನ ನಕಲಿ ಪ್ರತೀಕವನ್ನು ಸೃಷ್ಟಿಸಿದ್ದಾರೆ ಎಂದು ಅವರು ಆರೋಪಿಸಿದರು.
ಸತ್ತ ಪ್ರಾಣಿಗಳ ಕಳೇಬರಗಳನ್ನು ವಿಲೇವಾರಿಗೊಳಿಸುವುದನ್ನು ನಾವು ನಿಲ್ಲಿಸಿದ್ದೇವೆ. ಸಾವಿರಾರು ಗೋವುಗಳು ಸತ್ತುಬಿದ್ದಿದ್ದು, ಎಲ್ಲೆಡೆ ದುರ್ವಾಸನೆ ಬೀರುತ್ತಿದೆ. ದಲಿತರು ಚರಂಡಿಗಳಲ್ಲಿ ಬಿದ್ದು ಸಾಯುತ್ತಿದ್ದಾರೆ. ಜಾತಿ ತಾರತಮ್ಯ ಮತ್ತು ಅಸ್ಪಶ್ಯತೆಯಿಂದ ಅವರು ನರಳುವಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಉನಾ ಘಟನೆ ದಲಿತರ ಆತ್ಮಸಾಕ್ಷಿಯನ್ನು ಬಡಿದೆಬ್ಬಿಸಿದ್ದು, ಜಾತಿ ವ್ಯವಸ್ಥೆಯು ತಮ್ಮ ಮೇಲೆ ಹೇರಿದ್ದ ಜಾತಿಯಾಧಾರಿತ ಉದ್ಯೋಗವನ್ನು ಅವರು ತೊರೆದಿದ್ದಾರೆ. ಸಾವಿರಾರು ದಲಿತರು ಗೋವುಗಳ ಕಳೇಬರಗಳನ್ನು ಕೈಯಿಂದಲೂ ಮುಟ್ಟುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದಾರೆ.
ದಲಿತರು ಸತ್ತ ದನಗಳನ್ನು ವಿಲೇವಾರಿ ಮಾಡುವ ವೃತ್ತಿಯನ್ನೇ ಅವಲಂಬಿಸಿದ್ದಾರೆ ಎಂಬ ಮಿಥ್ಯೆಯನ್ನು ಇದು ಭಗ್ನಗೊಳಿಸಿದೆ ಎಂದು ಮೇವಾನಿ ಹೇಳಿದರು.
ದನಗಳ ಕಳೇಬರಗಳನ್ನು ವಿಲೇವಾರಿ ಮಾಡದ್ದಕ್ಕಾಗಿ ಹಲವಾರು ಗ್ರಾಮಗಳಲ್ಲಿ ಮೇಲ್ಜಾತಿಗಳ ಜನರು ದಲಿತರ ಮೇಲೆ ಹಲ್ಲೆಗಳನ್ನೂ ನಡೆಸಿದ್ದಾರೆ ಎಂದು ಅವರು ಆರೋಪಿಸಿದರು.







