ಮಡಿಕೇರಿ: ಗೋರಕ್ಷಕರಿಂದ ಹಲ್ಲೆ, ಗುಂಡಿನ ದಾಳಿ

ಮಡಿಕೇರಿ, ಸೆ.11: ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ ಎಂಬ ಆರೋಪ ಹೊರಿಸಿ ಇಬ್ಬರ ಮೇಲೆ ಸಂಘಪರಿವಾರದ ಕಾರ್ಯಕರ್ತರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಕಗ್ಗೋಡ್ಲು ಎಂಬಲ್ಲಿ ನಡೆದಿದೆ.
ಕಗ್ಗೋಡ್ಲು ಗ್ರಾಮದ ಗಣಪತಿ ಎಂಬವರಿಗೆ ಸೇರಿದ್ದ ಎರಡು ಜಾನುವಾರುಗಳನ್ನು ಕೊಂಡಂಗೇರಿಯ ಬಷೀರ್ ಎಂಬುವವರು ಪಿಕ್‌ಅಪ್ ವಾಹನದಲ್ಲಿ ಕೊಂಡೊಯ್ಯುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭ ವಾಹನವನ್ನು ಅಡ್ಡಗಟ್ಟಿದ ಗುಂಪೊಂದು ಬಶೀರ್ ಹಾಗೂ ಪಿಕಪ್ ಚಾಲಕ ಸಲಾಂ ಎಂಬವರ ಮೇಲೆ ಹಲ್ಲೆ ನಡೆಸಿದೆ. ಅಲ್ಲದೆ, ಏರ್‌ಗನ್‌ನಿಂದ ಗುಂಡು ಹಾರಿಸಲಾಗಿದ್ದು, ಪಿಕ್‌ಅಪ್‌ನ ಗಾಜಿಗೆ ಹಾನಿಯಾಗಿದೆ ಎಂದು ಆರೋಪಿಸಲಾಗಿದೆ.
ಇಬ್ಬರು ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಸಂಬಂಧ ಪೊಲೀಸರು ಗಣಪತಿ ಅವರನ್ನು ಠಾಣೆಗೆ ಕರೆಸಿಕೊಂಡ ಸಂದರ್ಭ ಅವರು, ತಮ್ಮ ಗೋವುಗಳನ್ನು ಕಳ್ಳತನ ಮಾಡಲಾಗಿದೆ ಎಂದು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕಳ್ಳತನ ಹಾಗೂ ಹಲ್ಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಪಿಕ್‌ಅಪ್ ವಾಹನ ಮತ್ತು ಜಾನುವಾರುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಎಸ್‌ಡಿಪಿಐ ಖಂಡನೆ, ಠಾಣೆಗೆ ಮುತ್ತಿಗೆ
ಬಶೀರ್ ಹಾಗೂ ಸಲಾಂ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಮತ್ತು ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಎಸ್‌ಡಿಪಿಐ ಕಾರ್ಯಕರ್ತರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಂದರ್ಭ ಪೊಲೀಸರೊಂದಿಗೆ ಕೆಲವು ಕಾಲ ಮಾತಿನ ಚಕಮಕಿಯೂ ನಡೆಯಿತು. ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹ್ಸಿನ್, ಘಟನೆಯನ್ನು ಖಂಡಿಸಿದರು. ಬಶೀರ್ ಅವರು ಕೃಷಿಕರಾಗಿದ್ದು, ಕೃಷಿ ಕಾರ್ಯಕ್ಕಾಗಿ ಗಣಪತಿ ಅವರಿಂದ ಎರಡು ಜಾನುವಾರುಗಳನ್ನು 17 ಸಾವಿರ ರೂ.ಗೆ ಖರೀದಿಸಿದ್ದರು. ಈ ಬಗ್ಗೆ ದೂರವಾಣಿ ಮೂಲಕ ಮಾತನಾಡಿದ ಸಾಕ್ಷಿಗಳಿದ್ದು, ಪೊಲೀಸ್ ತನಿಖೆಯಿಂದ ನೈಜಾಂಶ ಹೊರಬರಲಿದೆ ಎಂದರು.
ಕಗ್ಗೋಡ್ಲುವಿನಿಂದ ಕೊಂಡಂಗೇರಿಗೆ ಜಾನುವಾರುಗಳನ್ನು ಕೊಂಡೊಯ್ಯುವ ವೇಳೆ ಪಿಕ್‌ಅಪ್ ವಾಹನ ಸ್ವಲ್ಪ ದೂರ ಸಾಗುತ್ತಿದ್ದಂತೆ ರಸ್ತೆ ಬದಿಯ ಕಾಡಿನಿಂದ ಕೆಲವು ವ್ಯಕ್ತಿಗಳು ದೊಣ್ಣೆ ಹಾಗೂ ಮಾರಕಾಸ್ತ್ರಗಳೊಂದಿಗೆ ಆಗಮಿಸಿದ್ದಾರೆ. ಅಲ್ಲದೆ, ದೂರದಿಂದಲೆ ಏರ್‌ಗನ್‌ನಿಂದ ಗುಂಡು ಹಾರಿಸಿದ್ದಾರೆ. ಈ ಸಂದರ್ಭ ಪಿಕ್‌ಅಪ್ ವಾಹನದ ಗಾಜು ಚೂರಾಗಿದೆ. ಈ ಸಂದರ್ಭ ಸಲಾಂ ತಪ್ಪಿಸಿಕೊಂಡಿದ್ದಾರೆ. ಆದರೆ, ಬಶೀರ್ ಅವರ ಮೇಲೆ ದೊಣ್ಣೆ ಹಾಗೂ ಏರ್‌ಗನ್‌ನ ಹಿಂಬದಿಯಿಂದ ತೀವ್ರ ರೀತಿಯಲ್ಲಿ ಹಲ್ಲೆ ನಡೆಸಲಾಗಿದೆಯೆಂದು ಅಮೀನ್ ಮೊಹ್ಸೀನ್ ಆರೋಪಿಸಿದರು.
ಜಾನುವಾರುಗಳನ್ನು ಮಾರಾಟ ಮಾಡಿದ ಗಣಪತಿ ಅವರು, ಆತಂಕಕ್ಕೆ ಒಳಗಾಗಿ ಯಾರದೋ ಒತ್ತಡಕ್ಕೆ ಮಣಿದು ಹಸು ಕಳ್ಳತನವಾಗಿದೆಯೆಂದು ದೂರು ನೀಡಿರುವುದಾಗಿ ಅವರು ಆರೋಪಿಸಿದರು. ಜಿಲ್ಲೆಯಲ್ಲಿ ಅನೈತಿಕ ಪೊಲೀಸ್‌ಗಿರಿ ಹೆಚ್ಚಾಗುತ್ತಿದ್ದು, ಜಿಲ್ಲಾಡಳಿತ ಇದನ್ನು ನಿಯಂತ್ರಿಸಬೇಕು. ಹಲ್ಲೆ ನಡೆಸಿದವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು.







