ಕೇಂದ್ರ ಪ್ರಾಯೋಜಿತ ಯೋಜನೆಗಳ ನಿಧಿ ವೆಚ್ಚಕ್ಕೆ ರಾಜ್ಯಗಳಿಗೆ ಹೆಚ್ಚು ಸ್ವಾತಂತ್ರ

ಹೊಸದಿಲ್ಲಿ, ಸೆ.11: ಸರಕಾರವು ಹೊಸ ನಮನೀಯ-ನಿಧಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅವು ಸ್ಥಳೀಯ ಅಭಿವೃದ್ಧಿ ಅಗತ್ಯಗಳಿಗೆ ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳನ್ವಯ(ಸಿಎಸ್‌ಎಸ್) ಹಣ ಖರ್ಚು ಮಾಡಲು ರಾಜ್ಯಗಳಿಗೆ ಹೆಚ್ಚು ಸ್ವಾತಂತ್ರ ನೀಡುತ್ತವೆ.
ಹೊಸ ನಿಯಮಗಳ ಪ್ರಕಾರ, ಪ್ರತಿ ಸಿಎಸ್‌ಎಸ್‌ನ ನಮನೀಯ ನಿಧಿಯನ್ನು ರಾಜ್ಯಗಳಿಗೆ ಈಗಿನ ಶೇ.10ರಿಂದ ಶೇ.25ಕ್ಕೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಶೇ.30ಕ್ಕೆ ಏರಿಸಲಾಗಿದೆ.
ಈ ನಮನೀಯ ನಿಧಿಗಳು ಸಾಮರ್ಥ್ಯ ಸುಧಾರಣೆಗೆ ಸ್ಥಳೀಯ ಅಗತ್ಯ, ಬೇಡಿಕೆ ಹಾಗೂ ಪ್ರಾಯೋಗಿಕ ಸಂಶೋಧನೆಗಳಿಗೆ ಹಣ ಒದಗಿಸಲು ರಾಜ್ಯಗಳಿಗೆ ಸ್ವಾತಂತ್ರವನ್ನು ಒದಗಿಸುತ್ತವೆಯೆಂದು ವಿತ್ತ ಸಚಿವಾಲಯ ತಿಳಿಸಿದೆ.
ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಉಪಶಮನ ಅಥವಾ ಪುನಸ್ಥಾಪನಾ ಚಟುವಟಿಕೆ ಕೈಗೊಳ್ಳಲು ಅಥವಾ ಆಂತರಿಕ ಭದ್ರತಾ ತೊಂದರೆಗಳಿಂದ ಸಂತ್ರಸ್ತವಾದ ಪ್ರದೇಶಗಳ ಸ್ಥಳೀಯ ಅಗತ್ಯವನ್ನು ತೃಪ್ತಿಪಡಿಸಲು ರಾಜ್ಯಗಳು ಈ ನಿಧಿಯನ್ನು ಬಳಸಬಹುದು.
ಅಂಗೀಕೃತ ಯೋಜನೆ ಒಟ್ಟಾರೆ ಗುರಿ ಹಾಗೂ ಉದ್ದೇಶಕ್ಕೆ ಅನುಗುಣವಾಗಿರುವ ಯಾವುದೇ ಉಪಯೋಜನೆ, ಭಾಗ ಅಥವಾ ಸಂಶೋಧನೆಗೆ ಖರ್ಚು ಮಾಡಬೇಕಾದ ನಮನೀಯ ನಿಧಿಗಾಗಿ, ರಾಜ್ಯಗಳು ಬಯಸಿದರೆ ಯಾವುದೇ ಸಿಎಸ್‌ಎಸ್‌ನ ಶೇ.25ರಷ್ಟನ್ನು ತೆಗೆದಿಡಬಹುದೆಂದು ಮಾರ್ಗಸೂಚಿ ಹೇಳಿದೆ.
ಆದಾಗ್ಯೂ, ನಮನೀಯ ನಿಧಿ ಸೌಲಭ್ಯ ಪಡೆಯಲು ರಾಜ್ಯ ಸರಕಾರಗಳು ರಾಜ್ಯಮಟ್ಟದ ಮಂಜೂರಾತಿ ಸಮಿತಿಯೊಂದನ್ನು ರಚಿಸಬೇಕಾಗುತ್ತದೆ.





