ಈ ಆಸ್ಪತ್ರೆಯಲ್ಲಿ ಬೇವಿನ ಮರಗಳೇ ರೋಗಿಗಳ ಪಾಲಿನ ವಾರ್ಡ್‌ಗಳು!

ಭರತಪುರ,ಸೆ.11: ಬೇವಿನ ಮರಗಳು ಪರಿಸರದಲ್ಲಿದ್ದರೆ ವಾತಾವರಣವೂ ಚೆನ್ನಾಗಿರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. ಮಾನವನ ಆರೋಗ್ಯ ಸಂರಕ್ಷಣೆಗೆ ನೆರವಾಗುವ ಅಂಶಗಳೂ ಬೇವಿನಲ್ಲಿವೆ. ಹಾಗೆಂದು ಬೇವಿನ ಮರವೇ ಆಸ್ಪತ್ರೆಯ ವಾರ್ಡ್ ಆಗಿಬಿಟ್ಟರೆ?
ಅಂತಹುದೊಂದು ನಿದರ್ಶನ ರಾಜಸ್ಥಾನದ ಧೋಲಪುರ ಜಿಲ್ಲೆಯ ಸೈಪಾವ್ ಸಮುದಾಯ ಆರೋಗ್ಯ ಕೇಂದ್ರದಲ್ಲಿದೆ. ರೋಗಿಗಳ ದಟ್ಟಣೆಯನ್ನು ನಿಭಾಯಿಸಲು ಒದ್ದಾಡುತ್ತಿರುವ ಕಡಿಮೆ ಸಂಖ್ಯೆಯಲ್ಲಿರುವ ಇಲ್ಲಿಯ ವೈದ್ಯಕೀಯ ಸಿಬ್ಬಂದಿಗಳು ಹೊಸದೊಂದು ದಾರಿ ಕಂಡುಕೊಂಡಿದ್ದಾರೆ. ಮಳೆಯಿಂದಾಗಿ ವೈರಾಣು ಜ್ವರದ ಪ್ರಕರಣಗಳು ಹೆಚ್ಚುತ್ತಿದ್ದು,ಆಸ್ಪತ್ರೆಯಲ್ಲಿ ಕೇವಲ ಹದಿನೈದೇ ಹಾಸಿಗೆಗಳಿವೆ. ಚಿಕಿತ್ಸೆಗಾಗಿ ತಮ್ಮನ್ನೇ ನಂಬಿಕೊಂಡು ಬರುತ್ತಿರುವ ರೋಗಿಗಳನ್ನು ವಾಪಸ್ ಕಳುಹಿಸಲೂ ಸಿಬ್ಬಂದಿಗಳಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಆಸ್ಪತ್ರೆಯ ಆವರಣದಲ್ಲಿರುವ ಎರಡು ಬೇವಿನ ಮರಗಳ ಕೆಳಗೇ ಜ್ವರಪೀಡಿರನ್ನು ಮಲಗಿಸುತ್ತಿದ್ದಾರೆ. ಮರಗಳ ಕಾಂಡಗಳಿಗ ಹೊಡೆಯಲಾಗಿರುವ ಮೊಳೆಗಳಿಗೆ ನೇತು ಹಾಕಲಾಗಿರುವ ಬಾಟ್ಲಿಗಳ ಮೂಲಕ ಜೀವರಕ್ಷಕ ದ್ರವಗಳನ್ನು ರೋಗಿಗಳ ದೇಹಕ್ಕೆ ಪೂರೈಸಲಾಗುತ್ತಿದೆ!
ಮರಗಳ ಸುತ್ತಲೂ ಇರುವ ಸಿಮೆಂಟಿನ ಕಟ್ಟೆ ಈ ರೋಗಿಗಳ ಪಾಲಿಗೆ ಆಸ್ಪತ್ರೆಯ ಮಂಚವಾಗಿದೆ. ಅವರ ಪಕ್ಕದಲ್ಲಿಯೇ ಬಂಧುಗಳು ಕುಳಿತುಕೊಂಡು ಜೀವರಕ್ಷಕ ದ್ರವಗಳ ಬಾಟ್ಲಿಗಳ ಮೇಲೆ ನಿಗಾಯಿಡುತ್ತಾರೆ ಮತ್ತು ಖಾಲಿಯಾದ ಕೂಡಲೇ ಸಿಬ್ಬಂದಿಗಳ ಬಳಿ ಓಡುತ್ತಾರೆ.
ಸಂಜೆಯಾಗುತ್ತಲೇ ಸಮುದಾಯ ಕೇಂದ್ರದ ಮುಖ್ಯ ಕಟ್ಟಡವನ್ನು ಸೇರಿಕೊಳ್ಳುವ ಈ ರೋಗಿಗಳು ಅಲ್ಲಿ ನೆಲದ ಮೇಲೆಯೇ ಮಲಗಿಕೊಂಡು ರಾತ್ರಿಯನ್ನು ಕಳೆಯುತ್ತಾರೆ.
ಈ ಆಸ್ಪತ್ರೆಯ ಒಳರೋಗಿಗಳ ವಿಭಾಗಕ್ಕೆ ದಿನವೊಂದಕ್ಕೆ ಕನಿಷ್ಠ 200 ಜನರಾದರೂ ಬರುತ್ತಿರುತ್ತಾರೆ. ವಾರ್ಡ್‌ಗಳಲ್ಲಿಯ ಮಂಚ,ನೆಲ,ಕಾರಿಡಾರ್...ಹೀಗೆ ಎಲ್ಲೆಂದರಲ್ಲಿ ರೋಗಿಗಳೋ ರೋಗಿಗಳು. ಜಾಗದ ಕೊರತೆ ಎದುರಾದಾಗ ಅಲ್ಲಿಯ ವೈದ್ಯರಿಗೆ ಹೊಳೆದಿದ್ದೇ ಬೇವಿನ ಮರದ ವಾರ್ಡ್. ಕನಿಷ್ಠ 20-25 ರೋಗಿಗಳಿಗೆ ಈ ಬೇವಿನ ಮರಗಳು ಆಶ್ರಯ ನೀಡುತ್ತಿವೆ.
ಇಲ್ಲಿ ಜಾಗದ ಕೊರತೆ ಮಾತ್ರವಲ್ಲ. ಇಲ್ಲಿ ಇರುವದು ಮೂವರೇ ವೈದ್ಯರು. ಔಷಧಿಗಳೂ ಮುಗಿದು ಹೋಗಿವೆ ಎನ್ನುವುದು ಆಸ್ಪತ್ರೆಯ ಉಸ್ತುವಾರಿ ಡಾ.ಚರಣಜೀತ್ ಸಿಂಗ್ ಚೌಹಾಣ್ ಅವರ ಅಳಲು. ಆದರೆ ಈ ಅಳಲು ಆಳುತ್ತಿರುವವರ ಕಿವಿಗೆ ಬೀಳುತ್ತಿಲ್ಲ.





