ಫ್ರಾನ್ಸ್‌ನಲ್ಲಿ ಬುರ್ಕಿನಿ ನಿಷೇಧವಿಲ್ಲ: ಫ್ರಾಂಕೊಯ್

ಪ್ಯಾರಿಸ್, ಸೆ.11: ಬುರ್ಕಿನಿ (ದೇಹವನ್ನು ಮುಚ್ಚುವ ಈಜುಡುಗೆ)ಗೆ ಫ್ರಾನ್ಸ್‌ನಲ್ಲಿ ನಿಷೇಧ ವಿಧಿಸಲಾಗುವುದಿಲ್ಲವೆಂದು ಅಧ್ಯಕ್ಷ ಫ್ರಾಂಕೊಯ್ ಹೊಲಾಂಡೆ ಸ್ಪಷ್ಟಪಡಿಸಿದ್ದಾರೆ ಹಾಗೂ ಫ್ರಾನ್ಸ್ ಇಸ್ಲಾಂ ಧರ್ಮವನ್ನು ಆಲಂಗಿಸಿಕೊಳ್ಳಬೇಕೆಂದು ಅವರು ಕರೆ ನೀಡಿದ್ದಾರೆ.
ಗುರುವಾರ ಪ್ಯಾರಿಸ್‌ನಲ್ಲಿ ಮಾಡಿದ ಭಾಷಣವೊಂದರಲ್ಲಿ ಅವರು ‘‘ಇಸ್ಲಾಂ ಧರ್ಮವು ಕ್ರೈಸ್ತ ಹಾಗೂ ಯೆಹೂದ್ಯ ಧರ್ಮ ಹಾಗೂ ಜಾತ್ಯತೀತತೆಯೊಂದಿಗೆ ಸಹಬಾಳ್ವೆ ನಡೆಸಬಲ್ಲದು ಎಂದು ಅಭಿಪ್ರಾಯಿಸಿದ ಫ್ರಾಂಕೊಯ್ ಅವರು ಭಯೋತ್ಪಾದನೆಯ ವಿರೋಧಿ ಹೋರಾಟವು, ದೇಶವು ಅನುಸರಿಸಿಕೊಂಡು ಬಂದಿರುವ ಜಾತ್ಯತೀತ ವೌಲ್ಯಗಳನ್ನು ಮೂಲೆಗುಂಪು ಮಾಡಬಾರದೆಂದು’’ ಅವರು ಕರೆ ನೀಡಿದರು.
ಮುಸ್ಲಿಮರಿಗೆ ಕಳಂಕ ಹಚ್ಚುವ ಯತ್ನಗಳು ದೇಶದಲ್ಲಿ ನಡೆಯುತ್ತಿರುವ ಬಗ್ಗೆ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದ ಜನತೆ ಸಹಿಷ್ಣುತೆಯಿಂದ ವರ್ತಿಸುವಂತೆ ಕರೆ ನೀಡಿದ ಫ್ರಾನ್ಸ್ ಅಧ್ಯಕ್ಷರು, ಬುರ್ಕಿನಿ ಈಜುಡುಗೆಯ ನಿಷೇಧದ ವಿರುದ್ಧ ಮುಸ್ಲಿಂ ಸಮುದಾಯದ ಪ್ರತಿಭಟನೆಯನ್ನು ಸಮರ್ಥಿಸಿದರು.
ಫ್ರಾನ್ಸ್‌ನ 30ಕ್ಕೂ ಅಧಿಕ ನಗರಗಳಲ್ಲಿ ಬುರ್ಕಿನಿಯನ್ನು ನಿಷೇಧಿಸಿರುವ ವಿರುದ್ಧ ಅಲ್ಲಿನ ಮುಸ್ಲಿಮರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಹೊಲಾಂಡೆ ಅವರ ಅಧಿಕಾರಾವಧಿ ಮುಂದಿನ ವರ್ಷ ಕೊನೆಗೊಳ್ಳಲಿದೆ. ತಾನು ಪುನಾರಾಯ್ಕೆಯನ್ನು ಕೋರಿ ಚುನಾವಣೆಗೆ ಸ್ಪರ್ಧಿಸಲಿರುವ ಬಗ್ಗೆ ಅವರು ಈತನಕ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಆದಾಗ್ಯೂ ಅವರು ಆಡಳಿತ ಪಕ್ಷದ ಅಭ್ಯರ್ಥಿಯಾಗುವ ಸಾಧ್ಯತೆಗಳು ದಟ್ಟವಾಗಿವೆಯೆನ್ನಲಾಗಿದೆ.







