ದಾಖಲೆ ಸಮೇತ ವಾದ ಮಂಡಿಸಿ; ಸರಕಾರಕ್ಕೆ ಬಸವರಾಜ ಬೊಮ್ಮಾಯಿ ಸಲಹೆ
ಕಾವೇರಿ ವಿವಾದ

ಬೆಂಗಳೂರು, ಸೆ.11: ಕಾವೇರಿ ವಿವಾದಕ್ಕೆ ಸಂಬಂಧಪಟ್ಟಂತೆ ಕಾವೇರಿ ಮೇಲುಸ್ತುವಾರಿ ಸಮಿತಿ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ದಾಖಲೆಗಳ ಸಮೇತ ವಾದ ಮಂಡಿಸಬೇಕೆಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಒತ್ತಾಯಿಸಿದ್ದಾರೆ. ರವಿವಾರ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾವೇರಿ ವಿವಾದಕ್ಕೆ ಸಂಬಂಧಪಟ್ಟಂತಹ ವಿಚಾರಣೆ ಇದೇ ತಿಂಗಳ 16ರಂದು ಬರಲಿದೆ. ಹೀಗಾಗಿ, ಕಾವೇರಿ ಮೇಲುಸ್ತುವಾರಿ ಸಮಿತಿ ಹಾಗೂ ಸುಪ್ರೀಂಕೋರ್ಟ್‌ನಲ್ಲಿ ದಾಖಲೆಗಳ ಸಮೇತ ವಾದ ಮಂಡಿಸಬೇಕೆಂದು ಒತ್ತಾಯಿಸಿದರು. ಸುಪ್ರೀಂಕೋರ್ಟ್ ಸೆ.5ರಂದು ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬೇಕೆಂಬ ಆದೇಶ ಹೊರಡಿಸಿದೆ. ಆದರೆ, ರಾಜ್ಯ ಸರಕಾರ ಸೆ.6ರಂದು ಮಾರ್ಪಾಡು ಅರ್ಜಿಯನ್ನು ಸಲ್ಲಿಸದೆ, ರೈತರ ಆಕ್ರೋಶ ಹೊರ ಬಂದ ನಂತರ ಮಾರ್ಪಾಡು ಅರ್ಜಿ ಸಲ್ಲಿಸಿದೆ ಎಂದು ಕಿಡಿಕಾರಿದರು. ತಮಿಳುನಾಡಿನ ತಂಜಾವೂರು, ತಿರುನಲ್ವೇಲಿ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಅಂತರ್ಜಲದ ಮಟ್ಟ ಉತ್ತಮವಾಗಿದ್ದರೂ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರು ಟ್ರಿಬ್ಯೂನಲ್‌ಗೆ ಪತ್ರ ಬರೆದು ಸಾಂಬಾ ಬೆಳೆಗೆ ಕಾವೇರಿ ನೀರಿನ ಆವಶ್ಯಕತೆ ಇದೆ ಎಂದು ತಿಳಿಸಿದ್ದಾರೆ. ಆದರೆ, ಕರ್ನಾಟಕ ಸರಕಾರ ಸುಪ್ರೀಂಕೋರ್ಟ್‌ಗೆ ತಡವಾಗಿ ಮಾರ್ಪಾಡು ಅರ್ಜಿ ಸಲ್ಲಿಸಿದೆ ಎಂದ ಅವರು, ಈ ವರ್ಷ ಕರ್ನಾಟಕ ರಾಜ್ಯದಲ್ಲಿ ಮಳೆ ಕಡಿಮೆಯಾಗಿ ಸಂಕಷ್ಟದ ವರ್ಷವಾಗಿದೆ ಎಂದು ಹೇಳಿದರು. ಇದು ಸಾಮಾನ್ಯ ವರ್ಷ ಎಂದು ತಮಿಳುನಾಡು ಸರಕಾರ ಮತ್ತಷ್ಟು ಕಾವೇರಿ ನೀರು ಬಿಡಲು ಅರ್ಜಿಯನ್ನು ಸಲ್ಲಿಸಿದೆ. ಹೀಗಾಗಿ, ಕರ್ನಾಟಕ ಸರಕಾರ ಕಾವೇರಿ ನೀರಿನ ಬಗ್ಗೆ ಅಂಕಿ ಅಂಶಗಳ ಸಮೇತ ನ್ಯಾಯಾಲಯಕ್ಕೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು. ಅಂದಾಗ ಮಾತ್ರ ನಮ್ಮ ಗೆಲುವು, ಸೋಲು ನಿರ್ಧಾರವಾಗುತ್ತದೆ ಎಂದು ಹೇಳಿದರು.
ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸುತ್ತೇವೆ ಎಂದು ನ್ಯಾಯಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಆದರೆ, ಈಗ ಪ್ರಧಾನಿ ನರೇಂದ್ರ ಮೋದಿ ಅವರು ಕಾವೇರಿ ವಿಚಾರಕ್ಕೆ ಸಂಬಂಧಪಟ್ಟಂತೆ ಮಧ್ಯ ಪ್ರವೇಶಿಸಬೇಕೆಂದು ಪ್ರಧಾನಿಗೆ ಪತ್ರ ಬರೆಯುವುದು ಸರಿಯಲ್ಲ. ನಾವು ಈಗಾಗಲೇ ಪ್ರಧಾನಿ ಮೋದಿ ಅವರಿಗೆ ಕಾವೇರಿ ವಿಚಾರದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಸುರೇಶ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.





