ವಿಭಜಿಸುವವರಿಗೆ ಅವಕಾಶ ನೀಡದಿರಿ
9/11 ವರ್ಷಾಚರಣೆ ಭಾಷಣದಲ್ಲಿ ಟ್ರಂಪ್ ವಿರುದ್ಧ ಒಬಾಮ ಪರೋಕ್ಷ ಟೀಕೆ

ವಾಶಿಂಗ್ಟನ್, ಸೆ.10: 9/11 ಭಯೋತ್ಪಾದಕ ದಾಳಿ ಘಟನೆಯ 15ನೆ ವರ್ಷಾಚರಣೆಯ ಮುನ್ನಾ ದಿನವಾದ ಶನಿವಾರ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಭಯೋತ್ಪಾದನೆಯ ದಾಳಿಗಳನ್ನು ಅಮೆರಿಕನ್ನರು ಒಗ್ಗಟ್ಟಿನಿಂದ ಎದುರಿಸಬೇಕು ಹಾಗೂ ಜನತೆಯಲ್ಲಿ ಒಡಕು ಮೂಡಿಸುವವರನ್ನು ಕಡೆಗಣಿಸಬೇಕೆಂದು ಕರೆ ನೀಡುವ ಮೂಲಕ ಹೇಳುವ ಮೂಲಕ, ಕೋಮುಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾದ ಡೊನಾಲ್ಡ್ ಟ್ರಂಪ್ ಅವರನ್ನು ಪರೋಕ್ಷವಾಗಿ ಟೀಕಿಸಿದರು.
ತನ್ನ ಸಾಪ್ತಾಹಿಕ ರೇಡಿಯೊ ಹಾಗೂ ಆನ್‌ಲೈನ್ ಭಾಷಣದಲ್ಲಿ ಮಾತನಾಡುತ್ತಿದ್ದ ಒಬಾಮ, ‘‘ನಮ್ಮನ್ನು ವಿಭಜಿಸುವವರಿಗೆ ನಾವು ಅವಕಾಶ ನೀಡಬಾರದು. ನಮ್ಮ ಸಮಾಜದ ಸಂರಚನೆಯನ್ನು ಶಿಥಿಲಗೊಳಿಸುವಂತಹ ರೀತಿಯಲ್ಲಿ ನಾವು ಪ್ರತಿಕ್ರಿಯಿಸಕೂಡದು’’ ಎಂದವರು ಅಭಿಪ್ರಾಯಿಸಿದರು.
‘‘ನಮ್ಮ ವೈವಿಧ್ಯತೆ, ಪ್ರತಿಭೆಗಳಿಗೆ ಮನ್ನಣೆ, ಜನಾಂಗ, ಲಿಂಗ ಹಾಗೂ ಧರ್ಮದ ಭೇದವಿಲ್ಲದೆ ಎಲ್ಲರನ್ನೂ ನ್ಯಾಯಯುತವಾಗಿ ನಡೆಸಿಕೊಳ್ಳುವುದು, ಈ ಎಲ್ಲಾ ಕಾರಣಗಳಿಂದಾಗಿ ನಮ್ಮ ದೇಶವು ಮಹಾನ್‌ರಾಷ್ಟ್ರವಾಗಿ ಹೊರಹೊಮ್ಮಿದೆಯೆಂದು ಒಬಾಮ ಹೇಳಿದರು.
ನಾವು ಈ ವೌಲ್ಯಗಳಿಗೆ ನಿಷ್ಠರಾಗಿ ನಡೆದುಕೊಂಡಲ್ಲಿ, ನಮ್ಮ ಪರಂಪರೆಯನ್ನು ಎತ್ತಿಹಿಡಿದಂತಾಗುವುದು ಹಾಗೂ ನಮ್ಮ ದೇಶವನ್ನು ಬಲಿಷ್ಠ ಹಾಗೂ ಮುಕ್ತವಾಗಿ ಇರಿಸಿದಂತಾಗುವುದು ಎಂದು ಒಬಾಮ ತಿಳಿಸಿದರು.
ದೇಶದಲ್ಲಿರುವ ಮುಸ್ಲಿಂ ಅಲ್ಪಸಂಖ್ಯಾತರು ಹಾಗೂ ಮೆಕ್ಸಿಕೊ ವಲಸಿಗರ ವಿರುದ್ಧ ಟ್ರಂಪ್ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿರುವುದನ್ನು ಒಬಾಮ ಈ ಹಿಂದೆಯೂ ಹಲವು ಬಾರಿ ಖಂಡಿಸಿದ್ದರು.







