ಇಂಗ್ಲಿಷ್ ಮೀಡಿಯಂ ಕಪ್ಪೆಗಳು

ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರನ್ನು ಬಾವಿಯೊಳಗಿನ ಕಪ್ಪೆ ಎನ್ನುವ ಅರ್ಥದಲ್ಲಿ ವ್ಯಾಖ್ಯಾನಿಸಿದೆ ನಮ್ಮ ಹೈಕೋರ್ಟ್. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವುದಾಗಿ ಅನುಮತಿ ಪಡೆದು, ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡುತ್ತಿದ್ದ ಶಾಲೆಯೊಂದರ ವಿರುದ್ಧ ದಾಖಲಾಗಿದ್ದ ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಇಂತಹದೊಂದು ಅಭಿಪ್ರಾಯವನ್ನು ಹೈಕೋರ್ಟ್ ವ್ಯಕ್ತ ಪಡಿಸಿದೆ. ಭಾಷೆಗಳ ಕುರಿತಂತೆ ಇಂತಹದೊಂದು ತಪ್ಪುಕಲ್ಪನೆಯನ್ನು ನಮ್ಮ ನ್ಯಾಯವ್ಯವಸ್ಥೆಯೊಳಗಿರುವ ಮಂದಿಯೇ ಹೊಂದಿದ್ದಾರೆ ಎಂದ ಮೇಲೆ, ಕನ್ನಡ ಮಾಧ್ಯಮ ಶಾಲೆಗಳ ಪರವಾಗಿ ನಮ್ಮ ನ್ಯಾಯಾಲಯ ಮಾತನಾಡೀತು ಎಂದು ನಿರೀಕ್ಷಿಸುವುದಾದರೂ ಹೇಗೆ? ನ್ಯಾಯಾಲಯ ಎತ್ತಿದ ಪ್ರಶ್ನೆ ಅರ್ಥಪೂರ್ಣವಾದುದೇ ಆಗಿದ್ದರೂ, ಅದು ಕನ್ನಡ ಮಾಧ್ಯಮದ ಕುರಿತಂತೆ ಹೊಂದಿರುವ ಧೋರಣೆ ಯಾವ ರೀತಿಯಲ್ಲೂ ಸಮರ್ಥನೀಯವಲ್ಲ. ಭಾಷೆ ಮತ್ತು ಜ್ಞಾನ ಇವೆರಡೂ ಬೇರೆ ಬೇರೆಯಾದುದು. ಭಾಷೆಯ ಮೂಲಕ ನಾವು ತಿಳುವಳಿಕೆಯನ್ನು ಪಡೆಯುತ್ತೇವೆಯೇ ಹೊರತು ಭಾಷೆಯೇ ತಿಳುವಳಿಕೆಯಲ್ಲ. ಇಂಗ್ಲಿಷ್‌ನಿಂದಷ್ಟೇ ನಾವು ಜಗತ್ತನ್ನು ತಿಳಿದುಕೊಳ್ಳಬಹುದು ಎನ್ನುವುದು ನಮ್ಮ ಮೂರ್ಖತನದ ಭಾಗವಾಗಿದೆ. ಇಂಗ್ಲಿಷ್ ಅಂತಾರಾಷ್ಟ್ರೀಯ ಮಟ್ಟದ ಭಾಷೆಯೇನೋ ನಿಜ. ಆದರೆ ಇಂಗ್ಲಿಷ್‌ನಿಂದಷ್ಟೇ ಜಗತ್ತಿನ ತಿಳುವಳಿಕೆಯನ್ನು ನಮ್ಮದಾಗಿಸಿಕೊಳ್ಳಲು ಸಾಧ್ಯ ಎನ್ನುವುದು ಅಜ್ಞಾನದ ಭಾಗವಾಗಿದೆ.
ಯಾಕೆಂದರೆ ಕನ್ನಡ ಈ ದೇಶಕ್ಕೆ, ವಿಶ್ವಕ್ಕೆ ಹಲವು ಚಿಂತಕರನ್ನು, ವಿಜ್ಞಾನಿಗಳನ್ನು, ತಂತ್ರಜ್ಞಾನಿಗಳನ್ನು ನೀಡಿದೆ. ಹಾಗೆಯೇ ನೂರಾರು ಅತ್ಯುತ್ತಮ ಇಂಗ್ಲಿಷ್ ಪ್ರೊಫೆಸರ್‌ಗಳನ್ನೂ ನೀಡಿದೆ. ಅವರೆಲ್ಲ ಕನ್ನಡ ಮಾಧ್ಯಮದಲ್ಲೇ ಕಲಿತು ಬೆಳೆದವರು ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ಇಂದು ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯುತ್ತಿಲ್ಲ ಎನ್ನುವ ಆರೋಪವಿದೆ. ಈ ಆರೋಪಗಳಲ್ಲಿ ನಿಜವೂ ಇದೆ. ಆದರೆ ಕನ್ನಡಕ್ಕೆ ಅಂತಹದೊಂದು ಸ್ಥಿತಿಯನ್ನು ಉದ್ದೇಶಪೂರ್ವಕವಾಗಿ ತರಲಾಯಿತು ಮತ್ತು ಅದರ ಹಿಂದೆ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ನಡೆಸುವ ಒಂದು ದೊಡ್ಡ ಮಾಫಿಯಾವೇ ಇದೆ. ಇಂದು ಕನ್ನಡ ಶಾಲೆಗಳನ್ನು ಅರ್ಥಾತ್ ಸರಕಾರಿ ಶಾಲೆಗಳನ್ನು ಉಳಿಸಿ, ಬೆಳೆಸಬೇಕಾದ ಸರಕಾರವೇ ಒಳಗೊಳಗೆ ಕನ್ನಡ ಶಾಲೆಗಳ ವಿರುದ್ಧ ಸಂಚು ಮಾಡಿದ ಪರಿಣಾಮವಾಗಿ ಕನ್ನಡ ಮಾಧ್ಯಮ ಶಾಲೆಗಳು ಮೂಲೆಗುಂಪಾಗುತ್ತಿವೆ. ಇವುಗಳಲ್ಲಿ ಕಲಿತ ಮಕ್ಕಳು ಉದ್ಯೋಗಾವಕಾಶಗಳನ್ನು ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಪ್ರತಿ ವರ್ಷ ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿವೆ. ಸಾಲಸೋಲ ಮಾಡಿಯಾದರೂ ಇಂಗ್ಲಿಷ್ ಮೀಡಿಯಂಗೆ ಮಕ್ಕಳನ್ನು ಕಳುಹಿಸಬೇಕು ಎನ್ನುವಂತಹ ಧೋರಣೆ ಪೋಷಕರಲ್ಲಿ ಮನೆ ಮಾಡುತ್ತಿವೆ. ಪರಿಣಾಮವಾಗಿ ಸರಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುತ್ತಿವೆ. ನಾಳೆ ರಾಜ್ಯದಲ್ಲಿ ಎಲ್ಲ ಸರಕಾರಿ ಶಾಲೆಗಳು ಮುಚ್ಚಿದರೆ ಅದರ ಅಂತಿಮ ಪರಿಣಾಮವೇನೆಂದರೆ ಮತ್ತೆ ಬಡವರ್ಗ, ಕೆಳವರ್ಗದ ಜನರು ಶಿಕ್ಷಣ ವಂಚಿತರಾಗಬೇಕಾಗುತ್ತದೆ. ಹಾಗೆಯೇ ಕನ್ನಡ ರಾಜ್ಯದಲ್ಲಿ ಸಂಪೂರ್ಣ ನಾಶವಾಗುತ್ತದೆ. ಹೈಕೋರ್ಟ್ ನ್ಯಾಯಾಧೀಶರ ಹೇಳಿಕೆ ಕನ್ನಡದ ಭವಿಷ್ಯದ ಕುರಿತಂತೆ ಇರುವ ಆತಂಕವನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡಿದೆ.
ಇಂದು ಕನ್ನಡ ಮಾಧ್ಯಮದ ಸುತ್ತ ಕೋಟೆ ಕಟ್ಟುವ ಕೆಲಸದಲ್ಲಿ ಸರಕಾರ ಪರೋಕ್ಷ ಭಾಗಿಯಾಗಿದೆ. ರಾಜ್ಯದ ಆಡಳಿತದಲ್ಲಿ, ನ್ಯಾಯ ವ್ಯವಸ್ಥೆಯಲ್ಲಿ, ಬ್ಯಾಂಕ್ ಮೊದಲಾದ ಸಾರ್ವಜನಿಕ ಸಂಸ್ಥೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಜಾರಿಗೆ ತರುವಲ್ಲಿ ವಿಫಲವಾಗಿದೆ. ಕನ್ನಡ ಮಾಧ್ಯಮಗಳಲ್ಲಿ ಕಲಿತ ಜನರು ನ್ಯಾಯಾಲಯದಲ್ಲಿ ಕನ್ನಡವನ್ನು ನಿರೀಕ್ಷಿಸುವಂತಿಲ್ಲ. ಸರಕಾರಿ ಕಚೇರಿಗಳಿಂದ ಹೊರಬೀಳುವ ಪ್ರಕಟಣೆಗಳಲ್ಲಿ, ಬ್ಯಾಂಕ್ ವ್ಯವಹಾರಗಳಲ್ಲಿ ಕನ್ನಡವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಕರ್ನಾಟಕದಲ್ಲೇ ಕನ್ನಡ ವ್ಯವಹಾರ ಸಾಧ್ಯವಿಲ್ಲದೇ ಇರುವಾಗ, ಕನ್ನಡದಲ್ಲಿ ಕಲಿತವರು ಕಂಗಾಲಾಗುವುದು ಸಹಜ. ತಾವು ಕಲಿತ ಕನ್ನಡ ಭಾಷೆಯ ಕುರಿತಂತೆ ಕೀಳರಿಮೆ ಹೊಂದುವುದು ಸಹಜವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕದ ವಿವಿಧ ಕಚೇರಿಗಳಲ್ಲಿ, ನ್ಯಾಯಾಲಯಗಳಲ್ಲಿ ಕಡ್ಡಾಯವಾಗಿ ಕನ್ನಡವನ್ನು ಜಾರಿಗೊಳಿಸುವುದು ಸರಕಾರದ ಕರ್ತವ್ಯವಾಗಿದೆ. ಇದು ಕನ್ನಡ ಮಾಧ್ಯಮವನ್ನು ಉಳಿಸಲು ಸರಕಾರ ಇಡಬಹುದಾದ ಮೊದಲ ಹೆಜ್ಜೆ. ಕನ್ನಡ ಮಾಧ್ಯಮದಲ್ಲಿ ಕಲಿತವರು ಇಂಗ್ಲಿಷ್‌ನ್ನು ತನ್ನದಾಗಿಸಲು ಸಾಧ್ಯವಿಲ್ಲ ಎನ್ನುವುದು ತಪ್ಪು ಕಲ್ಪನೆಯಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಜೊತೆ ಜೊತೆಯಾಗಿ ಹೆಜ್ಜೆಯಿಡಬೇಕಾಗಿದೆ. ಈ ಹಿಂದೆ ಖ್ಯಾತ ಚಿಂತಕ ಅನಂತಮೂರ್ತಿಯವರು ಹೇಳಿದಂತೆ ‘‘ಕನ್ನಡದ ಜೊತೆ ಜೊತೆಗೆ ಇಂಗ್ಲಿಷ್’’. ಈ ಮೂಲಕ ಕನ್ನಡವೂ ಉಳಿಯುತ್ತದೆ. ಇಂಗ್ಲಿಷ್ ಕಲಿತ ವಿದ್ಯಾರ್ಥಿಗಳಲ್ಲಿ ತನ್ನತನವೂ ಬೆಳೆಯುತ್ತದೆ. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತು, ಅತ್ತ ಇಂಗ್ಲಿಷ್‌ಗೂ ಸಲ್ಲದೆ, ಇತ್ತ ಕನ್ನಡಕ್ಕೂ ಸಲ್ಲದೆ ತ್ರಿಶಂಕು ಸ್ಥಿತಿಯಲ್ಲಿ ಬೆಳೆಯುವ ಮಕ್ಕಳಿಗಿಂತ, ಕನ್ನಡದಲ್ಲಿ ಬೇರಿಳಿಸಿ ಇಂಗ್ಲಿಷ್‌ನ್ನು ತನ್ನದಾಗಿಸಿಕೊಂಡ ಮಕ್ಕಳೇ ಭವಿಷ್ಯವನ್ನು ಎದುರಿಸಲು ಹೆಚ್ಚು ಶಕ್ತರಾಗುತ್ತಾರೆ.
ಆದುದರಿಂದ, ಸರಕಾರಿ ಶಾಲೆಗಳನ್ನು ಅಥವಾ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಲು ಸರಕಾರದ ಮುಂದಿರುವ ಏಕೈಕ ದಾರಿಯೆಂದರೆ, ಅಲ್ಲಿ ಇಂಗ್ಲಿಷನ್ನೂ ಪರಿಣಾಮಕಾರಿಯಾಗಿ ಕಲಿಸಲು ವ್ಯವಸ್ಥೆಯನ್ನು ಮಾಡುವುದು. ಇಂದು ಜಾತಿಗೊಂದು, ಧರ್ಮಕ್ಕೊಂದು ಇಂಗ್ಲಿಷ್ ಮೀಡಿಯಂ ಶಾಲೆಗಳು ಹುಟ್ಟಿಕೊಳ್ಳುತ್ತಿವೆ. ವರ್ಗ ಮತ್ತು ಧರ್ಮಗಳ ರೂಪದಲ್ಲಿ ಶಾಲೆಗಳು ವಿದ್ಯಾರ್ಥಿಗಳನ್ನು ಬೇರ್ಪಡಿಸುತ್ತಿವೆ. ಶ್ರೀಮಂತಮಕ್ಕಳಿಗೊಂದು ಶಾಲೆ, ನಿರ್ದಿಷ್ಟ ಧರ್ಮೀಯರಿಗೊಂದು ಶಾಲೆ ...ಇಂತಹ ವ್ಯವಸ್ಥೆಯಲ್ಲಿ ಬೆಳೆಯುವ ಮಕ್ಕಳು ಈ ದೇಶದ ಬಹುಸಂಸ್ಕೃತಿಗೆ ದೊಡ್ಡ ಸವಾಲಾಗುತ್ತಾರೆ. ಅನ್ಯತೆ ಬೆಳೆಯಲು ಇದು ಬಹು ಮುಖ್ಯ ಕಾರಣವಾಗಿದೆ. ಇಂತಹ ಬಿರುಕುಗಳನ್ನು ಮುಚ್ಚಬೇಕಾದರೆ ಸರಕಾರಿ ಶಾಲೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಾಗಿದೆ. ಎಲ್ಲ ಜಾತಿ, ಧರ್ಮ, ವರ್ಗಗಳ ಮಕ್ಕಳು ಕಡ್ಡಾಯವಾಗಿ ಹತ್ತನೆ ತರಗತಿಯವರೆಗೆ ಸರಕಾರಿ ಶಾಲೆಯಲ್ಲೇ ಕಲಿಯುವಂತಹ ವಾತಾವರಣ ನಿರ್ಮಾಣವಾಗಬೇಕು. ಈ ದೇಶದ ಬಹುಸಂಸ್ಕೃತಿಯನ್ನು ಮಕ್ಕಳು ಬಾಲ್ಯದಲ್ಲಿ ಮೈಗೂಡಿಸಿಕೊಳ್ಳಬೇಕು. ಹತ್ತನೆ ತರಗತಿಯ ಬಳಿಕ ಮಕ್ಕಳು ತಮಗೆ ಬೇಕಾದುದನ್ನು ಆರಿಸಿಕೊಳ್ಳಲಿ. ಆದರೆ ಅಲ್ಲಿಯವರೆಗೆ ಪರಸ್ಪರ ಎಲ್ಲ ಧರ್ಮ, ಜಾತಿಗಳ ಮಕ್ಕಳು ಒಂದೇ ಬಯಲಲ್ಲಿ ಆಡುತ್ತಾ ಬೆಳೆಯಬೇಕು. ಹಾಗಾದಲ್ಲಿ ನಮ್ಮ ದೇಶದ ವೈವಿಧ್ಯತೆ ಉಳಿಯುತ್ತದೆ. ಜನರಲ್ಲಿ ಮನೆ ಮಾಡುತ್ತಿರುವ ಅನ್ಯತೆ ದೂರವಾಗುತ್ತದೆ.
ಸದ್ಯಕ್ಕೆ ಇಂಗ್ಲಿಷ್ ಮಾಧ್ಯಮಗಳ ವಿದ್ಯಾರ್ಥಿಗಳೇ ಬಾವಿಯೊಳಗಿರುವ ಕಪ್ಪೆಗಳಾಗುತ್ತಿದ್ದಾರೆ. ಅಲ್ಲಿ ಕಲಿಯುತ್ತಿರುವ ಮಕ್ಕಳು ಈ ದೇಶದ ಬಹುಸಂಸ್ಕೃತಿಯ ಪರಿಚಯವಿಲ್ಲದೆ ಬೆಳೆಯುತ್ತಿದ್ದಾರೆ. ಹೊರಜಗತ್ತಿನ ಪರಿಚಯವೇ ಇಲ್ಲ. ಶಾಲೆಗಳ ನಾಲ್ಕು ಗೋಡೆ ಬಿಟ್ಟರೆ, ಮತ್ತೆ ಮನೆ. ಇದರ ಹೊರತಾದ ಬೇರೆ ಜಗತ್ತೇ ಅವರಿಗೆ ತಿಳಿದಿಲ್ಲ. ಪುಸ್ತಕದೊಳಗಿನ ಹುಳಗಳಾಗಿ ಬೆಳೆಯುತ್ತಿರುವ ಈ ಮಕ್ಕಳು, ಶಾಲೆಯಿಂದ ಹೊರ ಬಿದ್ದಾಕ್ಷಣ ಕಣ್ಣಿನ ಪಟ್ಟಿ ಬಿಚ್ಚಿದವರಂತೆ ಕಂಗಾಲಾಗುತ್ತಾರೆ. ಇವರು ಸಹಜವಾಗಿ ಪ್ರಕೃತಿಯಲ್ಲಿ ಬೆಳೆದ ಗಿಡಗಳಲ್ಲ. ಬರೇ ಕುಂಡದಲ್ಲಿ ಬೆಳೆಸಿದ ಕೃತಕ ಗಿಡಗಳು ಇವುಗಳು. ಇಂತಹ ವಿದ್ಯಾರ್ಥಿಗಳು ನೋಡುವುದಕ್ಕೇನೋ ಪ್ರತಿಭಾವಂತರಂತೆ ಕಾಣುತ್ತಾರೆ. ಆದರೆ ನಿಜವಾದ ಸವಾಲನ್ನು ಎದುರಿಸುವಾಗ ಸಂಪೂರ್ಣ ವಿಫಲವಾಗುತ್ತಾರೆ. ಕನ್ನಡ ಮಾಧ್ಯಮದಲ್ಲಿ ಕಲಿತ ಮಕ್ಕಳು ಪ್ರಕೃತಿಯ ಸಹಜ ಗಾಳಿ, ಬೆಳಕು, ಮಣ್ಣಿನಿಂದ ಮೈತಳೆದು ನಿಂತವರು. ಆದರೆ ಅವರ ಬೆಳವಣಿಗೆಗೆ ಅಡ್ಡಿಯಾಗಿರುವ ಕೆಲವು ಹಿತಾಸಕ್ತಿಗಳನ್ನು ತೆರವು ಮಾಡುವ ಹೊಣೆಗಾರಿಕೆ ಸರಕಾರಕ್ಕೆ ಸೇರಿದೆ.







