ಸಿರಿಯ: ಟರ್ಕಿ ವಾಯುದಾಳಿ; ಕನಿಷ್ಠ 20 ಐಸಿಸ್ ಉಗ್ರರ ಹತ್ಯೆ
ಇಸ್ತಾಂಬುಲ್,ಸೆ.11: ಉತ್ತರ ಸಿರಿಯದಲ್ಲಿ ತನ್ನ ಯುದ್ಧ ವಿಮಾನಗಳು ಐಸಿಸ್ ಬಂಡುಕೋರರ ನೆಲೆಗಳ ಮೇಲೆ ದಾಳಿ ನಡೆಸಿ, ಕನಿಷ್ಠ 20 ಮಂದಿ ಉಗ್ರರನ್ನು ಹತ್ಯೆಗೈದಿದೆಯಂದು ಟರ್ಕಿಯ ಸೇನೆ ರವಿವಾರ ತಿಳಿಸಿದೆ.
ಐಸಿಸ್‌ಗೆ ಸೇರಿದ್ದೆಂದು ಗುರುತಿಸಲಾದ ಮೂರು ಕಟ್ಟಡಗಳ ಮೇಲೆ ಟರ್ಕಿ ವಾಯುಪಡೆಯ ವಿಮಾನಗಳು ದಾಳಿ ನಡೆಸಿರುವುದಾಗಿ ಸೇನಾ ಪಡೆ ಮುಖ್ಯಸ್ಥರ ಕಚೇರಿಯು ಇಂದು ಬಿಡುಗಡೆಗೊಳಿಸಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಸಿರಿಯದಲ್ಲಿ ಕದನವಿರಾಮವೇರ್ಪಡಿಸುವ ಬಗ್ಗೆ ಅಮೆರಿಕ-ರಶ್ಯ ನಡುವೆ ಒಪ್ಪಂದ ಜಾರಿಗೊಂಡ ಎರಡೇ ದಿನಗಳೊಳಗೆ ಈ ದಾಳಿ ನಡೆದಿದೆ.
ಐಸಿಸ್ ವಶದಲ್ಲಿರುವ ಗಡಿಪ್ರದೇಶದ ಪಟ್ಟಣವಾದ ಜಾರಾಬ್ಲುಸ್‌ನ ಮರುಸ್ವಾಧೀನಕ್ಕಾಗಿ ತನಗೆ ನಿಷ್ಠವಾಗಿರುವ ಬಂಡುಕೋರ ಗುಂಪುಗಳಿಗೆ ನೆರವಾಗಲು ಟರ್ಕಿಯು ಕಳೆದ ತಿಂಗಳು ಸಿರಿಯ ಗಡಿಯುದ್ದಕ್ಕೂ ಟ್ಯಾಂಕ್‌ಗಳನ್ನು ನಿಯೋಜಿಸಿತ್ತು. ಈ ಕಾರ್ಯಾಚರಣೆ ಆರಂಭಗೊಂಡಾಗಿನಿಂದ ಟರ್ಕಿಯ ಯುದ್ಧ ಜೆಟ್ ವಿಮಾನಗಳು ಐಸಿಸ್ ನೆಲೆಗಳ ವಿರುದ್ಧ ಹಲವಾರು ದಾಳಿಗಳನ್ನು ನಡೆಸಿವೆ.ಈ ಮಧ್ಯೆ ಇದೇ ಪ್ರದೇಶದಲ್ಲಿ ಟರ್ಕಿ ಹಾಗೂ ಕುರ್ದಿಷ್ ಬಂಡುಕೋರರ ವಿರುದ್ಧ ಭೀಕರ ಸಂಘರ್ಷ ಭುಗಿಲೆದ್ದಿದೆ.







