ವಾಘಾ ಗಡಿಯಲ್ಲಿ ಭಾರತದ ಸರಕು ಸಾಗಾಟ ತಡೆದಿಲ್ಲ
ಅಫ್ಘಾನ್‌ಗೆ ಪಾಕ್ ಸ್ಪಷ್ಟನೆ
ಇಸ್ಲಾಮಾಬಾದ್,ಸೆ.11: ವಾಘಾ ಗಡಿ ಮೂಲಕ ಅಫ್ಘಾನ್ ಉದ್ಯಮಿಗಳು ಭಾರತಕ್ಕೆ ಸರಕುಗಳನ್ನು ಸಾಗಾಟ ಮಾಡುವುದನ್ನು ತಾನು ತಡೆದಿಲ್ಲವೆಂದು ಪಾಕಿಸ್ತಾನ ರವಿವಾರ ಸ್ಪಷ್ಟಪಡಿಸಿದೆ. ಪಾಕಿಸ್ತಾನದ ವರ್ತಕರಿಗೆ ತನ್ನ ದೇಶದ ಮಾರ್ಗವಾಗಿ ಮಧ್ಯ ಏಶ್ಯಕ್ಕೆ ಸರಕುಗಳ ಸಾಗಣೆಗೆ ಅವಕಾಶ ನೀಡುವುದಿಲ್ಲವೆಂದು ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಎಚ್ಚರಿಕೆ ನೀಡಿದ ಕೆಲವೇ ದಿನಗಳ ಬಳಿಕ ಪಾಕ್ ಈ ಹೇಳಿಕೆ ನೀಡಿದೆ.
ಅಫ್ಘಾನ್ ಅಧ್ಯಕ್ಷರ ಹೇಳಿಕೆಗೆ ಪಾಕ್ ವಿದೇಶಾಂಗ ವಕ್ತಾರ ನಫೀಸ್ ಝಕರಿಯಾ ಪ್ರತಿಕ್ರಿಯಿಸುತ್ತಾ, ‘‘ಅಫ್ಘಾನಿಸ್ತಾನದ ಜೊತೆ ಏರ್ಪಟ್ಟ ಒಪ್ಪಂದದ ಪ್ರಕಾರ, ಭಾರತವು ಪಾಕಿಸ್ತಾನದ ಮೂಲಕ ಅಫ್ಘಾನಿಸ್ತಾನಕ್ಕೆ ತನ್ನ ಸರಕುಗಳನ್ನು ಸಾಗಿಸಲು ಸಾಧ್ಯವಿಲ್ಲ. ಆದರೆ ಅಫ್ಘಾನಿಸ್ತಾನವು ಪಾಕ್ ಮಾರ್ಗವಾಗಿ ಭಾರತಕ್ಕೆ ಸರಕುಗಳನ್ನು ಮಾರಾಟ ಮಾಡಬಹುದಾಗಿದೆ. ಅಫ್ಘಾನಿಸ್ತಾನದ ಜನತೆಗೆ ವ್ಯಾಪಾರ ಸಂಚಾರ ಸೌಲಭ್ಯವನ್ನು ಒದಗಿಸುವ ಮೂಲಕ ಆ ದೇಶದ ಬಗ್ಗೆ ತನಗಿರುವ ಬದ್ಧತೆಯನ್ನು ಪಾಕಿಸ್ತಾನವು ಈಡೇರಿಸಿದೆಯೆಂದು, ಅವರು ಬಿಬಿಸಿ ಉರ್ದು ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಅಫ್ಘಾನ್ ಹಾಗೂ ಪಾಕಿಸ್ತಾನ ಪರಸ್ಪರ ದೋಷಾರೋಪಗಳನ್ನು ಮಾಡುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಉಭಯದೇಶಗಳ ನಡುವಣ ಬಾಂಧವ್ಯ ವಿಷಮಗೊಂಡಿದೆ.





