ಅಣ್ವಸ್ತ್ರ ಶಕ್ತ ರಾಷ್ಟ್ರವೆಂಬ ಮಾನ್ಯತೆ ನೀಡಿ
ಅಮೆರಿಕಕ್ಕೆ ಉ.ಕೊರಿಯ ಸವಾಲು
ಯೊಂಗ್‌ಯಾಂಗ್ (ಉ.ಕೊರಿಯ),ಸೆ.11: ತಾನೊಂದು ಕಾನೂನುಬದ್ಧ ಅಣ್ವಸ್ತ್ರ ರಾಷ್ಟ್ರವೆಂದು ಅಮೆರಿಕವು ತನಗೆ ಮಾನ್ಯತೆ ನೀಡಬೇಕೆಂಬ ತನ್ನ ಬೇಡಿಕೆಯನ್ನು ಉತ್ತರ ಕೊರಿಯ ರವಿವಾರ ಪುನರುಚ್ಚರಿಸಿದೆ. ಇತ್ತೀಚೆಗೆ ಬೃಹತ್ ಅಣ್ವಸ್ತ್ರ ಪರೀಕ್ಷೆಯನ್ನು ನಡೆಸಿರುವ ಉತ್ತರ ಕೊರಿಯದ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಜಾಗತಿಕ ಶಕ್ತಿಗಳು ಮಾರ್ಗೋಪಾಯಗಳನ್ನು ಹುಡುಕುತ್ತಿರುವಾಗಲೇ ಉತ್ತರ ಕೊರಿಯ ಈ ಹೇಳಿಕೆ ನೀಡಿದೆ.
ಉತ್ತರ ಕೊರಿಯದ ವಿದೇಶಾಂಗ ಸಚಿವಾಲಯದ ವಕ್ತಾರ ಇಂದು ಬಿಡುಗಡೆಗೊಳಿಸಿದ ಹೇಳಿಕೆಯೊಂದರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ನೀತಿಯು ನೈತಿಕ ದಿವಾಳಿತನದಿಂದ ಕೂಡಿದೆಯೆಂದು ಟೀಕಿಸಿದ್ದಾರೆ.
‘‘ಕಾನೂನುಬದ್ಧ ಅಣ್ವಸ್ತ್ರ ಶಕ್ತ ರಾಷ್ಟ್ರವೆಂಬ ಸ್ಥಾನಮಾನವನ್ನು ಉತ್ತರಕ್ಕೆ ಕೊರಿಯಾಗೆ ನಿರಾಕರಿಸಲು ಬರಾಕ್ ಒಬಾಮಾ ಭಾರೀ ಶ್ರಮಪಡುತ್ತಿದ್ದಾರೆ. ಆದರೆ ಅವರ ಈ ಕೃತ್ಯವು ಅಂಗೈಯನ್ನು ಅಡ್ಡಹಿಡಿದು, ಸೂರ್ಯನನ್ನು ಮರೆಮಾಚಲು ಯತ್ನಿಸುವಷ್ಟೇ ಮೂರ್ಖತನದ್ದಾಗಿದೆಯೆಂದು’’ ವಿದೇಶಾಂಗ ವಕ್ತಾರರು ಹೇಳಿಕೆಯನ್ನು ಉಲ್ಲೇಖಿಸಿ, ಉ.ಕೊರಿಯದ ಅಧಿಕೃಕ ಸುದ್ದಿಸಂಸ್ಥೆ ಕೆಸಿಎನ್‌ಎ ವರದಿ ಮಾಡಿದೆ.
ಉತ್ತರ ಕೊರಿಯ ಎಂಟು ತಿಂಗಳ ಬಳಿಕ ಎರಡನೆ ಬಾರಿಗೆ ಅಣ್ವಸ್ತ್ರ ಪರೀಕ್ಷೆ ನಡೆಸಿದೆ. ಕಳೆದ ಶುಕ್ರವಾರ 10 ಕಿಲೋ ಟನ್ ಪ್ರಮಾಣದ ಅಣ್ವಸ್ತ್ರವನ್ನು ಪರೀಕ್ಷಿಸಲಾಗಿದ್ದು, ಅದು ಹಿಂದಿಗಿಂತ ಎರಡು ಪಟ್ಟು ಅಧಿಕ ಶಕ್ತಿಶಾಲಿಯಾಗಿದೆ.
ಶುಕ್ರವಾರ ನಡೆಸಲಾದ ಅಣ್ವಸ್ತ್ರ ಪರೀಕ್ಷೆಯ ಯಶಸ್ಸಿನಿಂದಾಗಿ ಉತ್ತರ ಕೊರಿಯದ ಪ್ರಜೆಗಳು ಆನಂದತುಂದಿಲರಾಗಿದ್ದಾರೆಂದು ಕೆಸಿಎನ್‌ಎ ಸುದ್ದಿಸಂಸ್ಥೆ ಹೇಳಿದೆ. ‘‘‘ಉಕ್ಕಿನ ಮನಸ್ಸಿನ ದಂಡನಾಯಕನ ಮಾರ್ಗದರ್ಶನದೊಂದಿಗೆ ಹಾಗೂ ಕೊರಿಯನ್ ಜನತೆಯ ಬಲದೊಂದಿಗೆ ಮುನ್ನಡೆಯುತ್ತಿರುವ ಈ ದೇಶದ ಘನತೆಯನ್ನು, ಅಣ್ವಸ್ತ್ರ ಪರೀಕ್ಷೆಯು ಪ್ರದರ್ಶಿಸಿದೆ’’ ಎಂದು ಪರಮಾಣು ವಿಜ್ಞಾನಿ ಕ್ವಾಂಗ್-ಹೊ ಹೇಳಿರುವುದಾಗಿ ಕೆಸಿಎನ್‌ಎ ಸುದ್ದಿ ಸಂಸ್ಥೆ ತಿಳಿಸಿದೆ.
ಸಾಮಾನ್ಯ ಕ್ಷಿಪಣಿಯಲ್ಲಿಯೂ ಅಳವಡಿಸಲು ಸಾಧ್ಯವಾಗುವಂತಹ ರೀತಿಯಲ್ಲಿ ಅಣ್ವಸ್ತ್ರ ಸಿಡಿತಲೆಯ ಗಾತ್ರವನ್ನು ತಾನು ಕಿರಿದುಗೊಳಿಸಿರುವುದಾಗಿ ಉತ್ತರ ಕೊರಿಯ ಘೋಷಿಸಿರುವುದು ಅಮೆರಿಕ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯವನ್ನು ಚಿಂತೆಗೀಡು ಮಾಡಿದೆ.







