ಕಾವೇರಿ ವಿವಾದ: ಇಂದು ಮೇಲುಸ್ತುವಾರಿ ಸಮಿತಿ ಸಭೆ; ಸುಪ್ರೀಂನಲ್ಲಿ ರಾಜ್ಯದ ಅರ್ಜಿ ವಿಚಾರಣೆ

ಬೆಂಗಳೂರು, ಸೆ.11: ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶದಿಂದ ಇಕ್ಕಟ್ಟಿಗೆ ಸಿಲುಕಿರುವ ರಾಜ್ಯ ಸರಕಾರಕ್ಕೆ ಸೋಮವಾರ ದಿಲ್ಲಿಯಲ್ಲಿ ನಡೆಯಲಿರುವ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ ಅತ್ಯಂತ ಮಹತ್ವದ್ದಾಗಿದೆ.
ಕೇಂದ್ರ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಶಶಿಶೇಖರ್ ಅಧ್ಯಕ್ಷತೆಯಲ್ಲಿ ಸೋಮವಾರ ಬೆಳಗ್ಗೆ 11:30ಕ್ಕೆ ಶ್ರಮಶಕ್ತಿ ಭವನದಲ್ಲಿ ಮೇಲುಸ್ತುವಾರಿ ಸಮಿತಿ ಸಭೆ ನಡೆಯಲಿದ್ದು, ಕರ್ನಾಟಕ, ತಮಿಳು ನಾಡು, ಕೇರಳ ಹಾಗೂ ಪಾಂಡಿಚೇರಿ ರಾಜ್ಯಗಳ ಮುಖ್ಯಕಾರ್ಯದರ್ಶಿಗಳು ಪಾಲ್ಗೊಳ್ಳಲಿದ್ದಾರೆ.
ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಮೇಲುಸ್ತುವಾರಿ ಸಮಿತಿಯು ಸರಿ ಪಡಿಸಬಹುದೆಂಬ ಆಶಾಭಾವನೆ ಯನ್ನು ತಳೆದಿರುವ ರಾಜ್ಯ ಸರಕಾ ರವು, ಈಗಾಗಲೇ ಸಮಿತಿ ಎದುರು ಮಂಡಿಸಬೇಕಾಗಿರುವ ವಾದದ ಕುರಿತು ಸಾಕಷ್ಟು ಸಿದ್ಧತೆಯನ್ನು ನಡೆಸಿಕೊಂಡಿದೆ.
ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸಿರುವ ಕಾನೂನು ತಂಡದ ಸದಸ್ಯರು ಶನಿವಾರ ಹಾಗೂ ರವಿವಾರ ಸತತ ಸಭೆಗಳನ್ನು ನಡೆಸಿದ್ದಾರೆ.
ಸುಪ್ರೀಂಕೋರ್ಟ್ ಸೆ.5ರಂದು ತಮಿಳುನಾಡಿಗೆ ಪ್ರತಿದಿನ 15 ಸಾವಿರ ಕ್ಯೂಸೆಕ್ ನೀರನ್ನು 10 ದಿನಗಳ ಕಾಲ ಬಿಡುಗಡೆ ಮಾಡುವಂತೆ ನೀಡಿದ್ದ ಆದೇಶವನ್ನು ಮಾರ್ಪಾಡು ಮಾಡುವಂತೆ ಶನಿವಾರ ರಾತ್ರಿ ರಾಜ್ಯ ಸರಕಾರ ಸಲ್ಲಿಸಿದ್ದ ಅರ್ಜಿಯು ಸೋಮವಾರ ವಿಚಾರಣೆಗೆ ಬರಲಿದೆ. ನ್ಯಾ.ದೀಪಕ್‌ಮಿಶ್ರಾ ಹಾಗೂ ನ್ಯಾ.ಉದಯ್‌ಲಲಿತ್ ಅವರಿರುವ ದ್ವಿಸದಸ್ಯ ಪೀಠದ ಎದುರು ರಾಜ್ಯ ಸರಕಾರದ ಅರ್ಜಿಯು ವಿಚಾರಣೆಗೆ ಬರುವ ಸಾಧ್ಯತೆಯಿದ್ದು, ಸಂಜೆಯ ವೇಳೆಗೆ ತೀರ್ಪು ಹೊರ ಬೀಳಬಹುದಾಗಿದೆ. ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ನಿರಂತರ ಪ್ರತಿಭಟನೆಗಳು, ಹೋರಾಟಗಳಿಗೆ ನಾಳೆ ಮಹತ್ವದ ದಿನವಾಗಿದೆ.
ನ್ಯಾಯಾಧಿಕರಣದ ಅಂತಿಮ ಆದೇಶ ಪಾಲನೆಗೆ ಕಾವೇರಿ ಮೇಲುಸ್ತುವಾರಿ ಸಮಿತಿ ಬದ್ಧ
ಹೊಸದಿಲ್ಲಿ, ಸೆ.11: ಸರ್ವೋಚ್ಚ ನ್ಯಾಯಾಲಯದ ನಿರ್ದೇಶದಂತೆ ತಮಿಳುನಾಡು ಮತ್ತು ಇತರ ರಾಜ್ಯಗಳಿಗೆ ಬಿಡುಗಡೆಗೊಳಿಸಬೇಕಾದ ಕಾವೇರಿ ನೀರಿನ ಪ್ರಮಾಣವನ್ನು ನಿರ್ಧರಿಸುವಾಗ ಕಾವೇರಿ ಮೇಲುಸ್ತುವಾರಿ ಸಮಿ ತಿಯು ಕಾವೇರಿ ಜಲವಿವಾದ ನ್ಯಾಯಾಧಿಕರಣದ ಅಂತಿಮ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಇಂದಿಲ್ಲಿ ತಿಳಿಸಿದ್ದಾರೆ.
ತಮಿಳುನಾಡು ಮತ್ತು ಇತರ ರಾಜ್ಯಗಳಿಗೆ ಬಿಡುಗಡೆ ಗೊಳಿಸಬೇಕಾದ ನೀರಿನ ಪ್ರಮಾಣವನ್ನು ನಿರ್ಧರಿಸಲು ಕೇಂದ್ರ ಜಲ ಸಂಪನ್ಮೂಲ ಕಾರ್ಯದರ್ಶಿ ಶಶಿ ಶೇಖರ್ ನೇತೃತ್ವದ ಸಮಿತಿಯು ಸೋಮವಾರ ಇಲ್ಲಿ ಸಭೆ ಸೇರಲಿದೆ.
ಸಮಿತಿಯು ತನ್ನ ಆದೇಶವನ್ನು ಹೊರಡಿಸುವ ಮುನ್ನ ಕಾವೇರಿ ನದಿ ಪಾತ್ರದ ವಾಸ್ತವಾಂಶಗಳ ಪರಿಶೀಲನೆಗಾಗಿ ತಜ್ಞರ ತಂಡವೊಂದನ್ನು ಕಳುಹಿಸುವಂತೆ ಕರ್ನಾಟಕವು ಕೇಂದ್ರವನ್ನು ಕೋರಿಕೊಂಡಿರುವ ಹಿನ್ನೆಲೆಯಲ್ಲಿ ಅಧಿಕಾ ರಿಯ ಈ ಹೇಳಿಕೆ ಹೊರಬಿದ್ದಿದೆ.
ತಜ್ಞರ ತಂಡವೊಂದನ್ನು ಕಳುಹಿಸುವಂತೆ ಸರ್ವೋಚ್ಚ ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿಲ್ಲ. ಹೀಗಾಗಿ ನಾವು ಅಂತಹ ತಂಡವೊಂದನ್ನು ಕಳುಹಿಸಲು ಸಾಧ್ಯವಿಲ್ಲ. ಸಮಿತಿಯು ನ್ಯಾಯಾಧಿ ಕರಣದ ಆದೇಶವನ್ನು ಪಾಲಿಸಬೇಕೆಂದು ಸರ್ವೋಚ್ಚ ನ್ಯಾಯಾಲಯವು ನಿರ್ದಿಷ್ಟ ವಾಗಿ ಹೇಳಿದೆ.
ಹೀಗಾಗಿ ನಾವದನ್ನು ಅಕ್ಷರಶಃ ಪಾಲಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ಸರ್ವೋಚ್ಚ ನ್ಯಾಯಾಲಯವು ತನ್ನ ಸೆ.5ರ ಮಧ್ಯಾಂತರ ಆದೇಶದಲ್ಲಿ ಮುಂದಿನ 10 ದಿನಗಳ ಕಾಲ ಪ್ರತಿದಿನ ತಮಿಳನಾಡಿಗೆ 15,000 ಕ್ಯುಸೆಕ್ ಕಾವೇರಿ ನೀರನ್ನು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಿದೆ. ಇದು ರಾಜ್ಯದ ಹಲವೆಡೆಗಳಲ್ಲಿ ರೈತರ ಪ್ರತಿಭಟನೆಗೆ ಕಾರಣವಾಗಿದೆ.







