ಓಣಂ ಹಬ್ಬವನ್ನು ಪ್ರಶ್ನಿಸಿದ ಆರೆಸ್ಸೆಸ್: ಕೇರಳದಲ್ಲಿ ವ್ಯಾಪಕ ಆಕ್ರೋಶ
ತಿರುವನಂತಪುರ, ಸೆ.11: ಓಣಂ ಹಬ್ಬದ ಸಂಭ್ರಮಾಚರಣೆಗೆ ಕೇರಳ ಸಜ್ಜಾಗುತ್ತಿದೆ. ಇದೇ ವೇಳೆ ಈ ಹಬ್ಬದ ಹಿಂದಿರುವ ದಂತಕಥೆಯನ್ನು ಪ್ರಶ್ನಿಸುವ ಮೂಲಕ ಆರೆಸ್ಸೆಸ್ ವಿವಾದವೊಂದನ್ನು ಸೃಷ್ಟಿಸಿದೆ. ಓಣಂ ಹಬ್ಬ ವಿಷ್ಣುವಿನ ಅವತಾರ ವಾಮನನ ಜನನದ ಸಂಭ್ರಮಾಚರಣೆಯಾಗಿದೆಯೇ ಹೊರತು, ದಾನವ ರಾಜ ಮಹಾಬಲಿಯು ತನ್ನ ರಾಜ್ಯಕ್ಕೆ ಭೇಟಿ ನೀಡುವ ಸಂಕೇತವಲ್ಲ ಎಂದು ಅದು ವಾದಿಸಿದೆ.
ಆರೆಸ್ಸೆಸ್‌ನ ಮುಖವಾಣಿ ‘ಕೇಸರಿ’ಯಲ್ಲಿ ಪ್ರಕಟ ಗೊಂಡಿರುವ, ಕೆ.ಉಣ್ಣಿಕೃಷ್ಣನ್ ನಂಬೂದಿರಿ ಅವರು ಬರೆದಿರುವ ಲೇಖನವು ವಾಮನ ಕುತಂತ್ರದಿಂದ ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ಕಳುಹಿಸಿದ್ದ ಮತ್ತು ಬಲಿ ಚಕ್ರವರ್ತಿ ತನ್ನ ಪ್ರಜೆಗಳನ್ನು ಭೇಟಿಯಾಗಲು ಪ್ರತಿ ವರ್ಷ ಭೂಮಿಗೆ ಮರಳುತ್ತಾನೆ ಎಂಬ ಜನಪ್ರಿಯ ಹಾಗೂ ವ್ಯಾಪಕವಾಗಿ ಹರಡಿರುವ ದಂತಕಥೆಯನ್ನು ಬೆಂಬಲಿಸುವ ಪ್ರಸ್ತಾಪ ಯಾವುದೇ ಪುರಾಣ ಗ್ರಂಥಗಳಲ್ಲಿ ಇಲ್ಲ ಎಂದು ಪ್ರತಿಪಾದಿಸಿದೆ.
ಲೇಖನಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಹಿರಿಯ ಸಿಪಿಎಂ ನಾಯಕಿ ಹಾಗೂ ರಾಜ್ಯದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರು,ಜಾತಿ,ಜನಾಂಗ ಮತ್ತು ಧರ್ಮದ ಹಂಗಿಲ್ಲದೆ ಎಲ್ಲರೂ ಓಣಂ ಆಚರಿಸುತ್ತಾರೆ. ಆರೆಸ್ಸೆಸ್ ಹಿಂದಿನ ಕಾಲದ ಮೇಲ್ಜಾತಿಗಳ ಯಾಜಮಾನ್ಯವನ್ನು ಮತ್ತೆ ಮರಳಿ ತರಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ. ಇದು ‘ಹಬ್ಬವನ್ನು ಅಪಹರಿಸುವ’ ಆರೆಸ್ಸೆಸ್ ಸಂಚಿನ ಭಾಗವಾಗಿದೆ ಎಂದೂ ಅವರು ಕುಟುಕಿದ್ದಾರೆ.
ಬಲಿ ಚಕ್ರವರ್ತಿ ಪ್ರತಿ ವರ್ಷದ ಮಲಯಾಳಂ ತಿಂಗಳು ಚಿಂಗಮ್‌ನಲ್ಲಿ ತನ್ನ ಪ್ರಜೆಗಳನ್ನು ಭೇಟಿಯಾಗಲು ಭೂಮಿಗೆ ಮರಳುತ್ತಾನೆ ಎನ್ನುವುದು ಕೇರಳದಲ್ಲಿ ವ್ಯಾಪಕವಾದ ನಂಬಿಕೆಯಾಗಿದ್ದು, ಈ ದಿನವನ್ನು ‘ತಿರು ಓಣಂ’ಎಂದು ಆಚರಿಸಲಾಗುತ್ತದೆ. ಈ ವರ್ಷ ಸೆ.14ರಂದು ಓಣಂ ಆಚರಿಸಲಾಗುತ್ತದೆ.
‘ಓಣಂ’ ಅನ್ನು ಮೊದಲಿಗೆ ವಾಮನನ ಜನ್ಮದಿನವೆಂದು ಆಚರಿಸಲಾಗುತ್ತಿತ್ತೇ ಹೊರತು ದಾನವ ರಾಜ ತನ್ನ ರಾಜ್ಯಕ್ಕೆ ಮರಳುವ ಸಂಕೇತವೆಂದು ಅಲ್ಲ. ವಾಮನನ ಕುತಂತ್ರದಿಂದಾಗಿ ಬಲಿ ಚಕ್ರವರ್ತಿ ಪಾತಾಳ ಸೇರುವಂತಾಯಿತೆಂದು ಯಾವುದೇ ಪುರಾಣದಲ್ಲಿ ಹೇಳಲಾಗಿಲ್ಲ. ಹೀಗಿರುವಾಗ ಈ ಸುಳ್ಳುಕಥೆ ಕೇರಳದಲ್ಲಿ ಹಬ್ಬಿದ್ದಾದರೂ ಹೇಗೆ ಎಂದು ನಂಬೂದಿರಿ ತನ್ನ ಲೇಖನದಲ್ಲಿ ಪ್ರಶ್ನಿಸಿದ್ದಾರೆ.
ವಾಸ್ತವದಲ್ಲಿ ವಾಮನ ಬಲಿ ಚಕ್ರವರ್ತಿಯನ್ನು ಆಶೀರ್ವದಿಸಿದ್ದನೇ ಹೊರತು ಅವನನ್ನು ಪಾತಾಳಕ್ಕೆ ತಳ್ಳಿ ದಂಡಿಸಿರಲಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.







