ನೊಂದ ಹೆಣ್ಣುಮಕ್ಕಳಿಗೆ ಮಾನವೀಯ ಸ್ಪಂದನ ಮುಖ್ಯ: ಜ್ಯೋತಿ

ಉಡುಪಿ, ಸೆ.11: ಅಸಹಾಯಕರಾಗಿರುವ ಹೆಣ್ಣು ಮಕ್ಕಳಿಗೆ ಸಾಮಾಜಿಕ ಜೀವನ ಒದಗಿಸಬಹುದಾದರೂ ಅದಕ್ಕಿಂತ ಮೀರಿದ ಮಾನವೀಯ ದೃಷ್ಟಿ ಇಂದಿನ ಪುರುಷ ಪ್ರಧಾನ ಸಮಾಜದಲ್ಲಿ ಹುಟ್ಟಬೇಕಾಗಿದೆ. ಸಮಾಜದಲ್ಲಿ ಸೃಷ್ಟಿಯಾಗಿರುವ ಸಮಸ್ಯೆಗಳಿಗೆ ನೈತಿಕ ಜವಾಬ್ದಾರಿ ಹೊತ್ತು ಮಾನವೀಯ ನೆಲೆಯಲ್ಲಿ ಸ್ಪಂದಿಸುವ ಕಾರ್ಯ ಆಗಬೇಕಾಗಿದೆ ಎಂದು ಕವಯಿತ್ರಿ ಜ್ಯೋತಿ ಗುರುಪ್ರಸಾದ್ ಹೇಳಿದ್ದಾರೆ.
ಇಂದ್ರಾಳಿಯ ನೂತನ ಪಬ್ಲಿಕೇಶನ್ಸ್ ವತಿ ಯಿಂದ ರವಿವಾರ ಉಡುಪಿ ಬಡಗುಬೆಟ್ಟು ಸೊಸೈಟಿಯ ಸಭಾಂಗಣದಲ್ಲಿ ಆಯೋಜಿಸಲಾದ ಲೇಖಕ ಗೋಪಾಲ ಬಿ.ಶೆಟ್ಟಿಯವರ 'ಮೂಕ ದೇವರ ರಾಜ್ಯದಲ್ಲಿ' ಕಥಾ ಸಂಕಲನದ ಬಿಡುಗಡೆ ಸಮಾರಂಭ ದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಹೆಣ್ಣಿನ ದೇಹ ಭೋಗದ ವಸ್ತು ಎಂಬ ಕೀಳುಮಟ್ಟದ ಅಭಿರುಚಿ ದೂರವಾಗಿ ಆಕೆಯೂ ದಾಂಪತ್ಯದ ಭಾಗ ಎಂಬ ಅಭಿಪ್ರಾಯ ಇಂದಿನ ಪುರುಷ ಪ್ರಧಾನ ಸಮಾಜದಲ್ಲಿ ಮೂಡಿದಾಗ ಈ ಮೂಕ ದೇವರ ರಾಜ್ಯ ಮಾಯವಾಗುತ್ತದೆ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್ ಮಾತನಾಡಿ, ವಾಟ್ಸ್‌ಆ್ಯಪ್, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಮಗ್ನವಾಗಿರುವ ಇಂದಿನ ಯುವ ತಲೆಮಾರಿಗೆ ಸಾಹಿತ್ಯ ಎಂಬುದು ಅಲರ್ಜಿಯಾಗಿದೆ. ಮನಸ್ಸು ಗಳನ್ನು ಒಡೆಯುವ, ದ್ವೇಷ ಹೆಚ್ಚಿಸುವ, ದೇಶವನ್ನು ಛಿದ್ರಗೊಳಿಸುವ ಬರಹಗಳು ಹೆಚ್ಚು ಹೆಚ್ಚು ಪ್ರಕಟ ಗೊಳ್ಳುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಮನಸ್ಸುಗಳನ್ನು ಒಂದುಗೂಡಿಸುವ ಬರಹಗಳು ಬರಬೇಕಾಗಿದೆ. ಅದನ್ನು ಯುವ ಸಮುದಾಯಕ್ಕೆ ತಲುಪಿಸುವ ಕಾರ್ಯ ಮಾಡಬೇಕು ಎಂದರು.
ಸೊಸೈಟಿಯ ಜನರಲ್ ಮೆನೇಜರ್ ಜಯಕರ ಶೆಟ್ಟಿ ಇಂದ್ರಾಳಿ ಕೃತಿ ಬಿಡುಗಡೆಗೊಳಿಸಿದರು. ವಿಚಾರವಾದಿ ಡಾ.ಭಾಸ್ಕರ ಮಯ್ಯ ಕೃತಿ ಪರಿಚಯ ಮಾಡಿದರು. ಲೇಖಕ ಗೋಪಾಲ ಬಿ.ಶೆಟ್ಟಿ ಸ್ವಾಗತಿಸಿದರು. ದಿನಕರ ಎಸ್. ಬೆಂಗ್ರೆ ಕಾರ್ಯಕ್ರಮ ನಿರೂಪಿಸಿದರು.







