ಗುಂಡಿನ ದಾಳಿಗೆ ಯುವಕ ಸಾವು
ಕಾಶ್ಮೀರ ಹಿಂಸಾಚಾರದ ಬಲಿ 78ಕ್ಕೆ ಏರಿಕೆ
ಶ್ರೀನಗರ, ಸೆ.11: ಜಮ್ಮು-ಕಾಶ್ಮೀರದ ಬದ್ಗಾಂವ್ ಜಿಲ್ಲೆಯಲ್ಲಿ ಆ.5ರಂದು ಭದ್ರತಾ ಪಡೆಗಳ ಗುಂಡೇಟಿನಿಂದ ಗಾಯಗೊಂಡಿದ್ದನೆನ್ನಲಾದ ಯುವಕನೊಬ್ಬ ಇಂದು ಮುಂಜಾನೆ ಕೊನೆಯುಸಿರೆಳೆಯುವುದರೊಂದಿಗೆ ಕಾಶ್ಮೀರ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 78ಕ್ಕೇರಿದೆ.
23ರ ಹರೆಯದ ಜಾವೇದ್ ಅಹ್ಮದ್ ಎಂಬಾತನನ್ನು ಆ.5ರಂದು ಆಸ್ಪತ್ರೆಗೆ ತರಲಾಗಿತ್ತು. ಆತನ ಕಾಲಿಗೆ ಗುಂಡೇಟು ತಗಲಿತ್ತು ಹಾಗೂ ತೀವ್ರ ರಕ್ತ ಸ್ರಾವವಾಗಿತ್ತೆಂದು ಶೇರ್-ಇ-ಕಾಶ್ಮೀರ್ ವೈದ್ಯ ವಿಜ್ಞಾನ ಸಂಸ್ಥೆಯ ವೈದ್ಯರು ತಿಳಿಸಿದ್ದಾರೆ.
ತಾವು ಆತನಿಗೆ ಭಾರೀ ಪ್ರಮಾಣದ ರಕ್ತ ನೀಡಿದೆವು ಹಾಗೂ ಕಾಲನ್ನು ಉಳಿಸಲು ಪ್ರಯತ್ನಿಸಿದೆವು. ಆದರೆ ಗುಂಡುಗಳು ಅದನ್ನು ಸರಿಪಡಿಸಲಾಗದಷ್ಟು ಹಾನಿಗೊಳಿಸಿದ್ದವು. ಆದುದರಿಂದ ಜಾವೇದ್‌ನ ಕಾಲನ್ನು ತುಂಡರಿಸಬೇಕಾಯಿತು. ಆದಾಗ್ಯೂ, ಆತ ಮೂತ್ರಪಿಂಡ ವೈಫಲ್ಯದಿಂದ ಇಂದು ಕೊನೆಯುಸಿರೆಳೆದನೆಂದು ‘ಸ್ಕಿಮ್ಸ್’ನ ವೈದ್ಯಕೀಯ ಅಧೀಕ್ಷಕ ಡಾ. ಫಾರೂಕ್ ಖಾನ್ ವಿವರಿಸಿದ್ದಾರೆ.
ಕಾಶ್ಮೀರದ ಪುಲಾಮ ಜಿಲ್ಲೆಯಲ್ಲಿ ಘರ್ಷಣೆಗಳು ಮುಂದುವರಿದಿದ್ದು, ರವಿವಾರ ಕಲ್ಲು ತೂರಾಟದಲ್ಲಿ ಹಲವರು ಗಾಯಗೊಂಡಿದ್ದಾರೆ. ಕಣಿವೆಯ ಇತರ ಕಡೆಗಳಲ್ಲಿ ರಾತ್ರಿ ದಾಳಿ ನಡೆಸಿದರೆಂದು ಆರೋಪಿಸಲಾಗಿರುವ ಭದ್ರತಾ ಯೋಧರು ಹಾಗೂ ಯುವಕರ ಗುಂಪುಗಳ ನಡುವೆ ಘರ್ಷಣೆಗಳು ನಡೆದಿವೆ.
ಕರೀಮಾಬಾದ್‌ನಲ್ಲಿ ರಾತ್ರಿ ದಾಳಿಗಳನ್ನು ಪ್ರತಿಭಟಿಸಲು ಬೀದಿಗಿಳಿದ ಸಾವಿರಾರು ಮಂದಿಯನ್ನು ಚದುರಿಸುವ ವೇಳೆ 60ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಅವರನ್ನು ಶ್ರೀನಗರದ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆಯೆಂದು ನಿವಾಸಿಗಳು ಆರೋಪಿಸಿದ್ದಾರೆ.
ಕುಲ್ಗಾಂವ್ ಜಿಲ್ಲೆಯಲ್ಲಿ ಸ್ವಾತಂತ್ರ ಪರ ಘೋಷಣೆ ಕೂಗುತ್ತ ಯುವಕರು ಹಲವು ಗ್ರಾಮಗಳ ಮೂಲಕ ಬೈಕ್ ಹಾಗೂ ಕಾರುಗಳ ರ್ಯಾಲಿ ನಡೆಸಿದ್ದಾರೆ.







