ದಾವೂದ್ ಇಬ್ರಾಹೀಂಗೇ ಪಂಗನಾಮ!
ಕೋಟ್ಯಂತರ ರೂಪಾಯಿ ಜೊತೆ ನಾಪತ್ತೆಯಾದ ಬಂಟ

ಹೊಸದಿಲ್ಲಿ, ಸೆ.12: ಭೂಗತ ಪಾತಕಿ, ಜಾಗತಿಕ ಭಯೋತ್ಪಾದಕ, ಅಂತಾರಾಷ್ಟ್ರೀಯ ಮಾದಕವಸ್ತು- ಭಯೋತ್ಪಾದನೆ ಚಟುವಟಿಕೆ ಜಾಲದ ರೂವಾರಿ ಎಂಬ ಕುಖ್ಯಾತಿ ಹೊಂದಿರುವ ದಾವೂದ್ ಇಬ್ರಾಹೀಂಗೇ ಆತನ ಬಂಟ 40 ಕೋಟಿ ರೂಪಾಯಿ ವಂಚಿಸಿದ್ದಾನೆ!
ಖಲೀಕ್ ಅಹ್ಮದ್ ಎಂಬ ವ್ಯಕ್ತಿ ಹೊಸದಿಲ್ಲಿ ಮೂಲದ ಗಣ್ಯರೊಬ್ಬರಿಂದ 45 ಕೋಟಿ ರೂಪಾಯಿಯನ್ನು ಪಡೆದು, 40 ಕೋಟಿ ರೂಪಾಯಿಯನ್ನು ಹವಾಲಾ ಜಾಲದ ಮೂಲಕ ವಿದೇಶಕ್ಕೆ ರವಾನಿಸಬೇಕಿತ್ತು, ದಾವೂದ್‌ಗೆ ವರ್ಗಾಯಿಸಿದ ವೆಚ್ಚವಾಗಿ 5 ಕೋಟಿ ರೂಪಾಯಿಯನ್ನು ಇಟ್ಟುಕೊಳ್ಳುವುದು ಆತನ ಕಾರ್ಯತಂತ್ರವಾಗಿತ್ತು ಎಂದು ಗುಪ್ತಚರ ವಿಭಾಗದ ತನಿಖೆಯಿಂದ ಬಹಿರಂಗವಾಗಿದೆ.
ಇದೀಗ 40 ಕೋಟಿ ರೂಪಾಯಿ ಮಂಗಮಾಯವಾಗಿದ್ದು, ಖಲೀಕ್ ಕೂಡಾ ಹಣದೊಂದಿಗೆ ನಾಪತ್ತೆ. ಪಾಕಿಸ್ತಾನದಲ್ಲಿ ದಾವೂದ್ ಬಂಟನಾಗಿರುವ ಜಬೀರ್ ಮೋತಿ ಹಾಗೂ ಭಾರತ ಹಾಗೂ ಶಾರ್ಜಾದಲ್ಲಿ ವಾಸ್ತವ್ಯ ಹೊಂದಿರುವ ಖಲೀಕ್ ಅಹ್ಮದ್ ನಡುವಿನ ದೂರವಾಣಿ ಸಂಭಾಷಣೆಯ ಜಾಡು ಹಿಡಿದು ಭಾರತೀಯ ಗುಪ್ತಚರ ವಿಭಾಗದ ಅಧಿಕಾರಿಗಳು ಈ ಮಾಹಿತಿ ಕಲೆಹಾಕಿದ್ದಾರೆ. +9170852*22* ದೂರವಾಣಿ ಮೂಲಕ ಸಂಭಾಷಣೆ ನಡೆದಿದೆ ಎನ್ನಲಾಗಿದೆ.
ದಾವೂದ್ ಬಂಟ ರಝಾಕ್‌ಭಾಯ್ ಈ ವರ್ಗಾವಣೆಯ ಹಣ ದುರ್ಬಳಕೆಯಾಗಿರುವ ವಿಷಯವನ್ನು ಎತ್ತಿದ್ದಾಗಿ ಮೋತಿ, ಖಲೀಕ್‌ಗೆ ಹೇಳುತ್ತಿದ್ದ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ರಝಾಕ್ ಪ್ರಕಾರ, ಖಲೀಕ್, ದಾವೂದ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ಅವರ ಗೌರವಕ್ಕೆ ಧಕ್ಕೆ ತರುವ ಕೃತ್ಯ ಎಸಗಿದ್ದಾನೆ. ಈ ಬಗ್ಗೆ ತನಿಖೆಗಾಗಿ ಡಿ ಕಂಪೆನಿ ಇಬ್ಬರು ಗೂರ್ಢಚರ್ಯರನ್ನು ದಿಲ್ಲಿಯಿಂದ ಕೆನಡಾಗೆ ಕಳುಹಿಸಿದೆ ಎನ್ನುವುದು ಅಧಿಕಾರಿಗಳ ಅಂದಾಜು. ಖಲೀಕ್ ಈಗ ಮಣಿಪುರದಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. 40 ಕೋಟಿಯ ಪೈಕಿ ಅರ್ಧವನ್ನು ಪನಾಮಾ ಬ್ಯಾಂಕ್‌ಗೆ ಕಳುಹಿಸಬೇಕಿತ್ತು ಹಾಗೂ ಉಳಿದ ಅರ್ಧವನ್ನು ದಾವೂದ್‌ನ ವಿದೇಶಿ ವ್ಯವಹಾರದಲ್ಲಿ ತೊಡಗಿಸಬೇಕಿತ್ತು ಎನ್ನಲಾಗಿದೆ.







