ಗೃಹಸಚಿವರನ್ನು ಭೇಟಿಯಾದ ಬಿಎಸ್‌ಎಫ್ ಪರೀಕ್ಷೆಯ ಟಾಪರ್ ನಬೀಲ್ ಅಹ್ಮದ್

ಹೊಸದಿಲ್ಲಿ, ಸೆ.11: ಬಿಎಸ್‌ಎಫ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಜಮ್ಮು-ಕಾಶ್ಮೀರದ ಯುವಕ ನಬೀಲ್ ಅಹ್ಮದ್ ವಾನಿ ಗೃಹ ಸಚಿವ ರಾಜ್‌ನಾಥ್ ಸಿಂಗ್‌ರನ್ನು ಭೇಟಿಯಾಗಿದ್ದಾರೆ. ನಬೀಲ್ ಅವರ ಯಶಸ್ಸು ಜಮು-ಕಾಶ್ಮೀರದ ಯುವಕರಿಗೆ ಸ್ಫೂರ್ತಿಯಾಗಲಿ ಎಂದು ಗೃಹ ಸಚಿವರು ಶುಭ ಹಾರೈಸಿದ್ದಾರೆ.
ಜಮ್ಮು-ಕಾಶ್ಮೀರದ ಉಧಂಪುರದ ಯುವಕ ನಬೀಲ್ ಅವರು ಇತ್ತೀಚೆಗೆ ನಡೆದ ಬಿಎಸ್‌ಎಫ್ ಸಹಾಯಕ ಕಮಾಂಡೆಂಟ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು.
‘‘ನಬೀಲ್ ಅವರ ಯಶೋಗಾಥೆ ಜಮು-ಕಾಶ್ಮೀರದ ಯುವಕರಲ್ಲಿ ಸಾಕಷ್ಟು ಸಾಮರ್ಥ್ಯವಿದೆ ಎಂಬುದನ್ನು ತೋರಿಸುತ್ತದೆ. ನಬೀಲ್ ಸಾಧನೆ ಕಣಿವೆ ರಾಜ್ಯದ ಯುವಕರು ಹಾಗೂ ಯುವತಿಯರಿಗೆ ಸ್ಫೂರ್ತಿಯಾಗಿದೆ’’ ಎಂದು ಗೃಹಸಚಿವರು ಹೇಳಿದ್ದಾರೆ.
ವಾನಿ ಗಡಿ ಭದ್ರತಾಪಡೆ ಅಧಿಕಾರಿ ಕೆ.ಕೆ. ಶರ್ಮ ಜೊತೆ ತೆರಳಿ ಗೃಹ ಸಚಿವರನ್ನು ಭೇಟಿಯಾದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮೆಹರಿಶಿ ಹಾಗೂ ಇತರರಿಗೆ ಗೃಹ ಸಚಿವರು ವಾನಿ ಅವರ ಪರಿಚಯ ಮಾಡಿಕೊಟ್ಟರು.
‘‘ಭದ್ರತಾ ಪಡೆಗೆ ಸೇರ್ಪಡೆಯಾಗಿ ದೇಶದ ಸೇವೆ ಮಾಡಬೇಕೆಂಬುದು ನನ್ನ ಕನಸಾಗಿತ್ತು. ಆ ಕನಸು ಇದೀಗ ಈಡೇರಿದೆ. ಉತ್ತಮ ಶಿಕ್ಷಣ ಪಡೆದರೆ, ಉತ್ತಮ ಉದ್ಯೋಗ ದೊರೆಯುತ್ತದೆ. ಕಲ್ಲುಗಳ ಬದಲಿಗೆ ಪೆನ್ನು ಹಿಡಿದು ಶಿಕ್ಷಣ ಪಡೆಯಬೇಕು’’ ಎಂದು ಉಧಂಪುರದಲ್ಲಿ ಜೂನಿಯರ್ ಎಂಜಿನಿಯರ್ ಆಗಿರುವ ವಾನಿ ಹೇಳಿದ್ದಾರೆ.







