ಕೇರಳದಲ್ಲಿ ಓಣಂ ಸಡಗರಕ್ಕೆ ಕ್ಷಣಗಣನೆ
ಭರ್ಜರಿಯಾಗಿ ನಡೆಯುತ್ತಿದೆ ಹೂವಿನ ವ್ಯಾಪಾರ

ಕಾಸರಗೋಡು, ಸೆ.12: ಕೇರಳೀಯರು ಓಣಂ ಸಂಭ್ರಮದಲ್ಲಿದ್ದಾರೆ. ಮಲಯಾಳಿಗರು ಎಲ್ಲಿದ್ದಾರೆಯೋ ಅಲ್ಲಿ ಓಣಂ ಹಬ್ಬ ಆಚರಣೆ ನಡೆದೇ ನಡೆಯುತ್ತಿದೆ. ಕೇರಳದಲ್ಲಿ ಓಣಂ ಹಬ್ಬದ ಸಂಭ್ರಮ ಸೆ.13ರಂದು ಆರಂಭಗೊಳ್ಳುತ್ತಿದೆ. 13 ರಂದು ಒಂದನೆ ಓಣಂ, 14 ರಂದು ತಿರುವೋಣಂ, 15 ರಂದು ಮೂರನೆ ಓಣಂ ನಡೆಯಲಿದೆ.
ಓಣಂ ಹಬ್ಬ ಎಂದರೆ ಕೇರಳೀಯರಿಗೆ ಹೊಸ ಹುಟ್ಟು ಪಡೆದ ಸಂಭ್ರಮ. ಕೃಷಿಕರಿಗಂತೂ ಹೊಸ ಭರವಸೆಯ ಉತ್ಸವ. ಮನೆ ಮಂದಿಗೆಲ್ಲ ಸಂತೋಷದ ಹೊನಲಿನ ಸಂಪತ್ತು ಸಮೃದ್ಧಿಯ ದಿನ. ಹೀಗಾಗಿ ಓಣಂ ಹಬ್ಬವನ್ನು ಭರ್ಜರಿಯಾಗಿ ಸ್ವಾಗತಿಸಲು ಕೇರಳ ಸಜ್ಜಾಗಿದೆ. ಶಾಂತಿ, ಸಾಮರಸ್ಯದ ಸಂಕೇತವಾಗಿರುವ ಮೂರುದಿನಗಳ ಓಣಂ ಹಬ್ಬದಲ್ಲಿ ಪ್ರಮುಖ ದಿನ ‘ತಿರುವೋಣಂ’ ಆಗಿದೆ. ಈ ಹಬ್ಬದಲ್ಲಿ ಕುಟುಂಬದೊಂದಿಗೆ ಸೇರಿಕೊಳ್ಳಲು ದೂರದಲ್ಲಿರುವ ಕುಟುಂಬ ಸದಸ್ಯರು ಈಗಾಗಲೇ ಊರಿಗೆ ಬಂದಿದ್ದಾರೆ. ಕುಟುಂಬ ಸಮೇತ ಆಚರಿಸುವ ಓಣಂ ಹಬ್ಬ ಕೇರಳಿಗರಿಗೆ ರಾಷ್ಟ್ರೀಯ ಹಬ್ಬವಾಗಿದೆ.
ಓಣಂ ಹಬ್ಬವೆಂದ ಕೂಡಲೇ ನೆನಪಿಗೆ ಬರುವುದು ಪೂಕಳಂ ರಂಗೋಲಿ. ಮಾವೇಲಿಯನ್ನು ಸ್ವಾಗತಿಸಲು ರಚಿಸುವ ಹೂವಿನ ರಂಗೋಲಿ ‘ಪೂಕಳಂ’ ತನ್ನದೇ ಆದ ವಿಶೇಷತೆಯನ್ನು ಛಾಪನ್ನು ಪಡೆದುಕೊಂಡಿದೆ. ಹೀಗಾಗಿ ಪೂಕಳಂಗೆ ಅವಶ್ಯಕವಾಗಿರುವ ಬಣ್ಣಬಣ್ಣದ ಹೂಗಳ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ. ದೂರದೂರುಗಳಿಂದ ಬಂದ ವ್ಯಾಪಾರಿಗಳು ಕೇರಳದಾದ್ಯಂತ ಬೀಡುಬಿಟ್ಟಿದ್ದು, ಹೂವಿನ ವ್ಯಾಪಾರ ಭರ್ಜರಿಯಾಗಿಯೇ ನಡೆಯುತ್ತಿದೆ.





