‘12 ಸಾವಿರ ಕ್ಯೂಸೆಕ್ ನೀರು ಬಿಡಿ’: ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಆದೇಶ

ಹೊಸದಿಲ್ಲಿ, ಸೆ.12: ಹತ್ತು ದಿನಗಳ ಕಾಲ 13 ಟಿಎಂಸಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪುನರ್ ಪರಿಶೀಲನೆ ಕೋರಿ ಕರ್ನಾಟಕ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಸೋಮವಾರ ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್ ಪ್ರತಿದಿನ 12 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶ ನೀಡಿದೆ.
ನ್ಯಾ.ದೀಪಕ್ ಮಿಶ್ರಾ ಹಾಗೂ ನ್ಯಾ. ಯು.ಯು. ಲಲಿತ್ ಅವರನ್ನೊಳಗೊಂಡ ವಿಭಾಗೀಯ ಪೀಠ ಕರ್ನಾಟಕದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ್ದು, ಸೆ.20ರ ವರೆಗೆ ನೀರು ಬಿಡುವಂತೆ ಆದೇಶಿಸಿತು. ವಿಚಾರಣೆಯನ್ನು ಸೆ.20ಕ್ಕೆ ಮುಂದೂಡಿತು. ಈ ಆದೇಶ ಕರ್ನಾಟಕಕ್ಕೆ ತೀವ್ರ ಹಿನ್ನಡೆಯಾಗಿ ಪರಿಣಮಿಸಿದೆ.
ಕರ್ನಾಟಕದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಸುಪ್ರೀಂಕೋರ್ಟ್‌ನ ತೀರ್ಪಿಗೆ ದೇಶದ ಎಲ್ಲ ನಾಗರಿಕರು ಬದ್ಧರಾಗಿರಬೇಕು. ಪ್ರಕರಣದಲ್ಲಿ ಕೇಂದ್ರ ಸರಕಾರದ ಯಾವುದೇ ಪಾತ್ರವಿಲ್ಲ ಎಂದು ಹೇಳಿದರು.
ಕರ್ನಾಟಕದ ಪರ ವಾದ ಮಂಡಿಸಿದ ರಾಜ್ಯದ ಪರ ವಕೀಲ ಫಾಲಿ ನಾರಿಮನ್, ‘‘ಕರ್ನಾಟಕ ರಾಜ್ಯ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ರಾಜ್ಯದಲ್ಲಿ ಮಾನ್ಸೂನ್ ಅಂತ್ಯವಾಗುತ್ತಿದೆ. ತಮಿಳುನಾಡಿಗೆ ಯಾವುದೇ ಸಮಸ್ಯೆಯಿಲ್ಲ. ಮುಂದಿನ ದಿನಗಳಲ್ಲಿ ತಮಿಳುನಾಡಿನಲ್ಲಿ ಮಾನ್ಸೂನ್ ಪ್ರಬಲವಾಗಿ ಸುರಿಯಲಿದೆ. ನಾವು ಸುಪ್ರೀಂಕೋರ್ಟ್ ಆದೇಶ ಪಾಲನೆಗಾಗಿ ನೀರನ್ನು ಬಿಡುಗಡೆ ಮಾಡಿದ್ದೇವೆ. ಇಂದೂ ಕೂಡ 16722 ಕ್ಯೂಸೆಕ್ಸ್ ನೀರು ಹರಿಸಿದ್ದೇವೆ. ಒಮ್ಮೆ ನೀರು ಬಿಟ್ಟರೆ, ಮತ್ತೆ ವಾಪಸ್ ಬರುವುದಿಲ್ಲ. ತಮಿಳುನಾಡಿಗೆ ಯಾವುದೇ ಸಮಸ್ಯೆಯಿಲ್ಲ. ತಮಿಳುನಾಡಿನ ಮೆಟ್ಟೂರು ಡ್ಯಾಂನಲ್ಲಿ 42.4 ಟಿಎಂಸಿ ನೀರು ಸಂಗ್ರಹವಾಗಿದೆ’’ ಎಂದು ವಾದಿಸಿದರು.
ಏಕಪಕ್ಷೀಯವಾಗಿ ನಿರ್ಧರಿಸುವ ಹಕ್ಕು ಕರ್ನಾಟಕಕ್ಕಿಲ್ಲ , ಕಾವೇರಿ ತೀರ್ಪು ಮಾರ್ಪಾಡು ಏಕಪಕ್ಷೀಯ ನಿರ್ಧಾರ. 2 ರಾಜ್ಯಗಳ ನೀರು ಸಮವಾಗಿ ಹಂಚಿಕೆಯಾಗಬೇಕು ಎಂದು ತಮಿಳುನಾಡು ಪರ ವಕೀಲ ಶೇಖರ್ ನಫಡೆ ವಾದ ಮಂಡಿಸಿದರು.







