ಈದ್ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಲಿ: ಹೈದರಾಲಿ ಸಖಾಫಿ
ಬೈಕಂಪಾಡಿ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಈದ್ ನಮಾಝ್

ಮಂಗಳೂರು, ಸೆ.12: ಇಸ್ಲಾಂ ಧರ್ಮವು ಜಗತ್ತಿನಲ್ಲಿ ಸಚ್ಚಾರಿತ್ರವಂತ ಸಮಾಜ ನಿರ್ವಿಸುವುದನ್ನು ಬಯಸುತ್ತ. ಮುಸ್ಲಿಮರು ಜಗತ್ತಿನಲ್ಲಿ ಒಳಿತಿಗಾಗಿ ಕಳುಹಿಸಲ್ಪಟ್ಟಿದ್ದಾರೆ. ಇದನ್ನೇ ಸದಾ ಸ್ಮರಿಸಿ, ಕೆಡುಕುಗಳಿಂದ ದೂರವಿದ್ದು, ಪರರ ಒಳಿತಿಗೆ ಶ್ರಮಿಸಬೇಕು ಎಂದು ಬೈಕಂಪಾಡಿ ಜುಮಾ ಮಸೀದಿಯ ಖತೀಬ್ ಹೈದರಾಲಿ ಸಖಾಫಿ ಕರೆ ನೀಡಿದ್ದಾರೆ.
ಅವರು ಇಂದು ಬೈಕಂಪಾಡಿ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಬಕ್ರೀದ್ ಹಿನ್ನೆಲೆಯಲ್ಲಿ ಈದ್ ಸಂದೇಶ ನೀಡಿ ಮಾತನಾಡುತ್ತಿದ್ದರು. ನೆಲದ ಕಾನೂನನ್ನು ಗೌರವಿಸುವುದು ಮುಸ್ಲಿಮರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಬಕ್ರೀದ್ ಕುರ್ಬಾನಿ ಸಂದರ್ಭದಲ್ಲಿ ಕಾನೂನನ್ನು ಗೌರವಿಸಿ, ಯಾರಿಗೂ ತೊಂದರೆಯಾಗದಂತೆ ಕುರ್ಬಾನಿ ನೀಡುವಂತೆ ಖತೀಬರು ಕರೆ ನೀಡಿದರು.
ಬಳಿಕ ಈದ್ ನಮಾಝ್ ಹಾಗೂ ಖುತ್ಬಾ ನೆರವೇರಿತು. ಬೈಕಂಪಾಡಿ, ಪಣಂಬೂರು, ಅಂಗರಗುಂಡಿ, ಶೇಡಿಗುರಿ ಮತ್ತಿತರ ಪ್ರದೇಶಗಳ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು. ಉತ್ತರ ಭಾರತ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತಿತರ ಪ್ರದೇಶಗಳಿಂದ ಕೆಲಸಕ್ಕೆ ಬಂದು ಈ ಭಾಗದಲ್ಲಿರುವ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಬೈಕಂಪಾಡಿ ಮುಸ್ಲಿಂ ಜಮಾಅತ್ ಅಧ್ಯಕ್ಷ ನಾಸೀರ್ ಲಕ್ಕಿಸ್ಟಾರ್, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ನ್ಯಾಯವಾದಿ ಮುಖ್ತಾರ್ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.





